ದೇಶಪ್ರಮುಖ ಸುದ್ದಿ

ಆಗ್ರಾ, ಗೋರಖ್ಪುರ ವಿಮಾನ ನಿಲ್ದಾಣಗಳಿಗೆ ಮರುನಾಮಕರಣ ; ಹಲವು ಸುಧಾರಣೆಗಳಿಗೆ ಯೋಗಿ ಚಾಲನೆ

ಲಖ್ನೋ : ಆಗ್ರಾ ಮತ್ತು ಗೋರಖ್ ಪುರ ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ ಆರೆಸ್ಸೆಸ್ ನಾಯಕರಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಮತ್ತು ಮಹಾಯೋಗಿ ಗೋರಖ್ ನಾಥ್ ಅವರ ಹೆಸರಿಡಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ನಿರ್ಧರಿಸಿದೆ.

ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗೋರಖ್ ಪುರದಲ್ಲಿರುವ ಭಾರತೀಯ ಸೇನೆಯ ವಾಯು ನೆಲೆಯಲ್ಲಿ ನಿರ್ಮಿಸಿರುವ ನಾಗರಿಕ ವಿಮಾನಯಾನ ಟರ್ಮಿನಲ್ ಗೆ ಮಹಾಯೋಗಿ ಗೋರಖ್ ನಾಥ್ ಅವರ ಹೆಸರಿಡಲಾಗುವುದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಇದೇ ನಾಥ ಪಂಥದ ಮಠದ ಶಿಷ್ಯ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. ವಿಮಾನ ನಿಲ್ದಾಣಕ್ಕೆ ತಮ್ಮ ಧಾರ್ಮಿಕ ಗುರುಗಳ ಹೆಸರಿಡುವ ಮೂಲಕ ತಮಗೆ ಆಶ್ರಯ ನೀಡಿದ ಮಠಕ್ಕೆ ಮುಖ್ಯಮಂತ್ರಿ ಗೌರವ ಸಲ್ಲಿಸಿದ್ದಾರೆ.

ಆಗ್ರಾದ ವಿಮಾನ ನಿಲ್ದಾಣವನ್ನು ಇನ್ನು ಮುಂದೆ ಆರೆಸ್ಸೆಸ್ ನಾಯಕ ಪಂಡಿತ್ ದೀನದಯಾಳ್ ಉಪಾಧ್ಯಾಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ.

ಇಷ್ಟೇ ಅಲ್ಲದೆ “ವಿಕಲಾಂಗ ಕಲ್ಯಾಣ ವಿಭಾಗ” ಎಂದಿರುವ ಇಲಾಖೆಯನ್ನು “ದಿವ್ಯಾಂಗ ಜನ ಸಶಕ್ತೀಕರಣ ವಿಭಾಗ” ಎಂದು ಮರುನಾಮಕರಣ ಮಾಡಲಾಗುವುದು.

ಸುಧಾರಣೆಯ ಸರದಾರ:

ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಗೋರಖ್’ಪುರ ಕ್ಷೇತ್ರದಿಂದ ಐದು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕ್ಷೇತ್ರದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಲು ಈಗಾಗಲೇ ಆದೇಶ ನೀಡಿದ್ದಾರೆ. ಮತ್ತು ರಾಜ್ಯ ಪೊಲೀಸ್ ಪಡೆಯಲ್ಲಿ “ಆ್ಯಂಟಿ ರೋಮಿಯೋ ದಳ” ರಚಿಸುವ ಮೂಲಕ ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ ಮತ್ತು ಸರ್ಕಾರ ಕಚೇರಿಗಳಲ್ಲಿ ಪಾನ್ ಮಸಾಲಾ, ಗುಟ್ಕಾ ಜಗಿಯದಂತೆ ಕಟ್ಟಾಜ್ಞೆ ಹೊರಡಿಸಿದ್ದಾರೆ.

Leave a Reply

comments

Related Articles

error: