ಮೈಸೂರು

ವಾರ್ಷಿಕ ಹಣಕಾಸು ಮತ್ತು ತೆರಿಗೆ ಸಮ್ಮೇಳನ 2021 :‘ಬದಲಾಗುವ ಆರ್ಥಿಕತೆಯಿಂದ ಚೇತರಿಸಿಕೊಳ್ಳುವಲ್ಲಿ ಹಣಕಾಸಿನ ಪಾತ್ರ”

ಮೈಸೂರು,ಮಾ.23:-‘ಬದಲಾಗುವ ಆರ್ಥಿಕತೆಯಿಂದ ಚೇತರಿಸಿಕೊಳ್ಳುವಲ್ಲಿ ಹಣಕಾಸಿನ ಪಾತ್ರ” ಎಂಬ ವಿಷಯದ ಮೇಲೆ ಸಿಐಐ ಮೈಸೂರು ತನ್ನ ವಾರ್ಷಿಕ ಹಣಕಾಸು ಮತ್ತು ತೆರಿಗೆ ಸಮ್ಮೇಳನವನ್ನು ಇತ್ತೀಚೆಗೆ ಆಯೋಜಿಸಿತ್ತು.

ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ   ಜಾರ್ಜ್ ಅಲೆಕ್ಸಾಂಡರ್ ಮುತ್ತೂಟ್‌ ಅವರು ತಮ್ಮ ಪ್ರಧಾನ ಭಾಷಣದಲ್ಲಿ ಕೆಲವು ಸಕಾರಾತ್ಮಕ ಟಿಪ್ಪಣಿಗಳನ್ನು ನೀಡಿದರು.  ಪ್ರಸಕ್ತ ಆರ್ಥಿಕತೆಯಲ್ಲಿ ಪುನರುಜ್ಜೀವನದ ಲಕ್ಷಣಗಳು ಕಂಡುಬರುತ್ತಿವೆ ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ದ್ರವ್ಯತೆ (ಹಣದ ಒಳಹರಿವು–ಹೊರಹರಿವು) ಇದೆ ಎಂದ ಅವರು, ರಿಯಲ್ ಎಸ್ಟೇಟ್ ಕ್ಷೇತ್ರವು ಸಹ ಬೆಳವಣಿಗೆಯ ಹಾದಿಯಲ್ಲಿದೆ, ಬಡ್ಡಿದರಗಳ ಕುಸಿತದಿಂದ ಈ ಕ್ಷೇತ್ರ ಮತ್ತೆ ಏರುಗತಿಗೆ ಬಂದಿದೆ. ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಿದೆ ಮತ್ತು ಆರ್ಥಿಕತೆಯ ಪುನರುಜ್ಜೀವನದಲ್ಲಿ ಎಂಎಸ್‌ಎಂಇ ಪಾತ್ರ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು.

ಸಿಯೇಟ್‌ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಿಎಫ್‌ಒ   ಕುಮಾರ್ ಸುಬ್ಬಯ್ಯ ಮಾತನಾಡಿ, ‘ಕೋವಿಡ್ ನಂತರದ ಆರ್ಥಿಕ ಚಂಚಲತೆ ಮತ್ತು ಅನಿಶ್ಚಿತತೆಯನ್ನು ನಿರ್ವಹಿಸುವುದು ಬಹಳ ಮುಖ್ಯವಾಗಿದೆ. ಅದರಂತೆ ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವ ಅವಶ್ಯಕತೆಯೂ ಹೆಚ್ಚಿದೆ. ಪ್ರತಿಯೊಂದು ಉದ್ಯಮವು ಈ ಆರ್ಥಿಕ ಚಂಚಲತೆಯನ್ನು ಅವಕಾಶವನ್ನಾಗಿ ಮಾಡಿಕೊಳ್ಳಬೇಕು’ ಎಂದು ಉಲ್ಲೇಖಿಸಿದರು.

ಸಿಐಐ ಮೈಸೂರು ಅಧ್ಯಕ್ಷರಾದ   ಪವನ್ ಜಿ ರಂಗಾ, ಬಹುಬೇಗ ಬದಲಾಗಬಹುದಾದ ಈ ಆರ್ಥಿಕತೆಯಲ್ಲಿ ಸಿಎಫ್‌ಒ ಪಾತ್ರವನ್ನು ಪ್ರಸ್ತಾಪಿಸಿದರು ಮತ್ತು ಉದ್ಯಮದ ಬೆಳವಣಿಗೆಯ ಹಾದಿಯನ್ನು ರೂಪಿಸುವಲ್ಲಿ ಇರುವ ಹಣಕಾಸು ವೃತ್ತಿಪರರ ಜವಾಬ್ದಾರಿಯನ್ನು ಪುನರುಚ್ಚರಿಸಿದರು.

ಸಿಐಐ ಮೈಸೂರಿನ ಹಿಂದಿನ ಅಧ್ಯಕ್ಷ,  ಅಮಿತ್ ಕುಮಾರ್, ಪ್ರಕ್ರಿಯೆಯಲ್ಲಿನ ಕೆಲವು ಅಡಚಣೆಗಳ ಹೊರತಾಗಿಯೂ ಉದ್ಯಮ ವೇಗವಾಗಿ ಪುನರುಜ್ಜೀವನಗೊಳ್ಳುತ್ತಿದೆ ಮತ್ತು ಸರ್ಕಾರದ ಮಟ್ಟದಲ್ಲಿ ವ್ಯಾಪಾರ ಉಪಕ್ರಮಗಳನ್ನು ಸುಲಭಗೊಳಿಸುವುದರಿಂದ ಉದ್ಯಮವು ಮತ್ತಷ್ಟು ಬೆಳೆಯಲು ಸಹಾಯವಾಗುತ್ತದೆ ಎನ್ನುವುದನ್ನು ಒತ್ತಿ ಹೇಳಿದರು.

ಐಡಿಬಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ     ನಾಗರಾಜ್ ಗಾರ್ಲಾ, ಆರ್ಥಿಕ ಸ್ಥಿತಿಯನ್ನು ಪ್ರಸ್ತಾಪಿಸಿದರು. ಸರ್ಕಾರದ ಉಪಕ್ರಮಗಳಾದ ಆತ್ಮನಿರ್ಭರ್‌ ಭಾರತ್, ಪ್ರೋತ್ಸಾಹ, ಉತ್ತೇಜನ ಪ್ಯಾಕೇಜುಗಳಂತಹ ಅಭಿಯಾನಗಳು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡಿವೆ ಎಂದರು. ತ್ರೈಮಾಸಿಕದಲ್ಲಿ (Q3) ಭಾರತದ ಜಿಡಿಪಿ ಸಕಾರಾತ್ಮಕವಾಗಿದೆ ಮತ್ತು ಸಾಲದ ಬೆಳವಣಿಗೆ ಸ್ಥಿರವಾಗಿದೆ ಮತ್ತು ಆರ್ಥಿಕತೆಯ ಎಲ್ಲಾ ಪ್ರಮುಖ ಸೂಚಕಗಳು ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿವೆ ಎಂದರು.

ಕ್ಯಾಸ್ಟಲಿಯಾಜ್ ಟೆಕ್ನಾಲಜೀಸ್‌ ನ ಸಿಇಒ   ಕೃಷ್ಣಮೂರ್ತಿ, “ಸ್ಯಾಪ್‌ನಲ್ಲಿ 2-ಬಿನ್ ಕಾನ್‌ ಬಾನ್‌ ವ್ಯವಸ್ಥೆ, ಜಿಎಸ್‌ ಟಿ ಎಂಡ್ ಟು ಎಂಡ್ ಆಟೊಮೇಷನ್ ಆಫ್ ಇ-ಇನ್ವಾಯ್ಸಿಂಗ್ ಮತ್ತು ಇ-ವೇ ಬಿಲ್’’ ಕುರಿತು ಮಾತನಾಡಿದರು.

ಮುತ್ತೂಟ್‌ ಫೈನಾನ್ಸ್‌ನ ಸಿಜಿಎಂ   ಬಿಜಿಮೊನ್ ಕೆ.ಆರ್. ಅವರು ಆರ್ಥಿಕತೆಗೆ ಚಿನ್ನದ ಸಾಲಗಳ ಮಹತ್ವವನ್ನು ಮತ್ತು ಎಂಎಸ್‌ಎಂಇ ಹಣಕಾಸು ವ್ಯವಸ್ಥೆಯಲ್ಲಿ ಎನ್‌ಬಿಎಫ್‌ಸಿಗಳ ಪ್ರಮುಖ ಪಾತ್ರವನ್ನು ತಿಳಿಸಿದರು.

ಎಸ್‌ ಬಿಐ ಎಸ್‌ಎಂಇ ವಿಭಾಗದ ಸಹಾಯಕ ಜನರಲ್ ಮ್ಯಾನೇಜರ್   ಭಾರತ್, ಎಂಎಸ್‌ ಎಂಇಗಳಿಗಾಗಿ ಎಸ್‌ ಬಿಐ ನೀಡುವ ವಿವಿಧ ಹಣಕಾಸು ಯೋಜನೆಗಳ ಕುರಿತು ಮಾತನಾಡಿದರು.

ಐಸಿಐಸಿಐ ಸೆಕ್ಯುರಿಟೀಸ್‌ ನ ದಕ್ಷಿಣ ವಿಭಾಗದ ಮುಖ್ಯಸ್ಥ   ಸತ್ಯಜಿತ್ ನಂದಕುಮಾರ್ ಅವರು ಎಂಎಸ್‌ ಎಂಇಗಳು ಮತ್ತು ವ್ಯಕ್ತಿಗಳಿಗೆ ಐಸಿಐಸಿಐ ಸೆಕ್ಯುರಿಟೀಸ್ ನೀಡುವ ವಿವಿಧ ಹಣಕಾಸು ಯೋಜನೆಗಳ ಕುರಿತು ಮಾತನಾಡಿದರು. ಐಸಿಐಸಿಐ ಸೆಕ್ಯುರಿಟೀಸ್ ನೀಡುವ ವಿವಿಧ ಸಂಪತ್ತು ನಿರ್ವಹಣಾ ಯೋಜನೆಗಳು, ವಿಮಾ ಯೋಜನೆಗಳು ಇತ್ಯಾದಿಗಳ ಬಗೆಗೂ ಅವರು ಮಾಹಿತಿ ನೀಡಿದರು.

ಸಿಐಐ ಮೈಸೂರು ಹಣಕಾಸು ಮತ್ತು ತೆರಿಗೆ ಸಮಿತಿಯ ಕನ್ವೀನರ್ ಮತ್ತು ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್‌ನ ಸಿಎಫ್‌ ಒ   ರಂಗನಾಥನ್ ಎಸ್., ಸಮ್ಮೇಳನಕ್ಕೆ ಥೀಮ್ ಹೊಂದಿಸಿದರು. ಎನ್. ರಂಗ ರಾವ್ & ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹ-ಕನ್ವೀನರ್ ಮತ್ತು ಸಿಎಫ್‌ ಒ   ದೇವಾನಾಥನ್ ಆರ್. ಅವರು ವಂದಿಸಿದರು. ಸಮ್ಮೇಳನದಲ್ಲಿ ವರ್ಚುವಲ್ ಪ್ಲಾಟ್‌ ಫಾರ್ಮ್ ಮೂಲಕ 100ಕ್ಕೂ ಹೆಚ್ಚು ಹಣಕಾಸು ವೃತ್ತಿಪರರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: