ಮೈಸೂರು

ಸಾಂಸ್ಕೃತಿಕ ಪ್ರಜ್ಞೆಯಿಂದ ಕಟ್ಟಿಕೊಂಡ ಜಾತಿಯನ್ನು ಅಕ್ಕ ಮಹಾದೇವಿ ನಿರಾಕರಿಸಿದ್ದರು : ಡಾ.ಕವಿತಾ ರೈ ಬಣ್ಣನೆ

ಕಾಯಕತ್ವ, ಶಿವತತ್ವಗಳ ಬಗ್ಗೆ ಅನುಸಂಧಾನ ಮಾಡುವಲ್ಲಿ ಅಕ್ಕಮಹಾದೇವಿ ಅಲ್ಲಮನಿಗೆ ಸರಿಸಮನಾಗಿ ಭುಜ ಕೊಟ್ಟಿದ್ದಾರೆ ಎಂದು ಕರಾಮುವಿಯ ಅಕ್ಕಮಹಾದೇವಿ ಅಧ‍್ಯಯನ ಮತ್ತು ಸಂಶೋಧನಾ ಪೀಠದ ನಿರ್ದೇಶಕಿ ಡಾ.ಕವಿತಾ ರೈ ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಶಿವಶರಣೆ ವಚನಗಾರ್ತಿ ಅಕ್ಕಮಹಾದೇವಿ ಒಂದು ಅವಲೋಕನ’ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ‍್ಘಾಟಿಸಿ ಅವರು ಮಾತನಾಡಿದರು.ಕುಲಪ್ರಜ್ಞೆಯಿಂದ ಮಾತ್ರವಲ್ಲದೇ ಸಾಂಸ್ಕೃತಿಕ ಪ್ರಜ್ಞೆಯಿಂದ ಕಟ್ಟಿಕೊಂಡ ಜಾತಿಯನ್ನೂ ಅಕ್ಕಮಹಾದೇವಿ ನಿರಾಕರಿಸಿದ್ದಾರೆ. ಬಯಲೇ ಧರ್ಮ ಎಂದು ನಂಬಿದ್ದರು. ಇದೇ ಕಾರಣದಿಂದ ಅಕ್ಕ ನಮಗೆ ಮುಖ‍್ಯರಾಗುತ್ತಾರೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಚಂದ್ರಶೇಖರ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯಾಗುವ ಸಂದರ್ಭದಲ್ಲಿ ಕೆಲವರು ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ. ಕಸಾಪ ಎಲ್ಲಾ ವ್ಯವಹಾರಗಳನ್ನು ಪಾರದರ್ಶಕವಾಗಿ ನಿರ್ವಹಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ಆರೋಪ ಸಹಜವಾದರೂ, ಈ ಸಂದರ್ಭದಲ್ಲಿ ಕಸಾಪದೊಂದಿಗೆ ಕೈಜೋಡಿಸಿವುದು ಕನ್ನಡ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದು ಎಂದು ತಿಳಿಸಿದರು.

ಅಕ್ಕಮಹಾದೇವಿ-ಪ್ರಸ್ತುತತೆ ಕುರಿತು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಧ‍್ಯಾಪಕಿ ಡಾ.ಲತಾ ಮೈಸೂರು, ಅಕ್ಕಮಹಾದೇವಿ-ಜೀವನ ದರ್ಶನ ಕುರಿತು ಕರಾಮುವಿ ಸಹಾಯಕ ಪ್ರಾಧ‍್ಯಾಪಕಿ ಡಾ.ಜ್ಯೋತಿ ಶಂಕರ್ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಅಧ‍್ಯಕ್ಷ ಡಾ.ವೈ.ಡಿ ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: