ಕರ್ನಾಟಕಪ್ರಮುಖ ಸುದ್ದಿ

ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು,ಮಾ.24-ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಎಲ್ಲ ಶಾಸಕರ ಬಗ್ಗೆ ತನಿಖೆಯಾಗಲಿ. ಆಗ ಎಲ್ಲರ ಬಂಡವಾಳ ಬಯಲಾಗಲಿದೆ ಎಂಬ ಸುಧಾಕರ್ ಹೇಳಿಕೆಗೆ ರಾಜ್ಯದ ರಾಜಕೀಯ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

ಹೀಗಾಗಿ ಟ್ವೀಟ್ ಮಾಡಿರುವ ಸುಧಾಕರ್ ಅವರು, ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಿಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನಾನು ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ನಮ್ಮ ಹದಿನೇಳು ಜನರ ವಿರುದ್ಧ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಸಚಿವರು, ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ. ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ ಎಂದಿದ್ದರು.

ಸಚಿವ ಸುಧಾಕರ್ ಅವರು ರಾಜ್ಯದಲ್ಲಿ 224 ಶಾಸಕರ ಬಗ್ಗೆ ತನಿಖೆಯಾಗಲಿ. ಯಾರು ಸತ್ಯಹರಿಶ್ಚಂದ್ರ, ಯಾರು ಶ್ರೀರಾಮಚಂದ್ರ, ಯಾರು ಏಕಪತ್ನಿ ವ್ರತಸ್ಥ ಎಂಬುದು ರಾಜ್ಯದ ಜನರಿಗೂ ತಿಳಿಯಲಿ ಎಂಬುದಾಗಿ ಸವಾಲ್ ಹಾಕಿದ್ದರು. (ಎಂ.ಎನ್)

Leave a Reply

comments

Related Articles

error: