ಕ್ರೀಡೆಪ್ರಮುಖ ಸುದ್ದಿ

ಐಸಿಸಿ ಟಿ20 ರ‍್ಯಾಂಕಿಂಗ್ ಪಟ್ಟಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಡ್ತಿ

ದುಬೈ,ಮಾ.24-ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಇಂದು ಟಿ20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಬಡ್ತಿ ಕಂಡಿದ್ದಾರೆ.

ಕೊಹ್ಲಿ ಒಂದು ಸ್ಥಾನದ ಏರಿಕೆಯೊಂದಕ್ಕೆ 4ನೇ ಸ್ಥಾನಕ್ಕೆ, ರೋಹಿತ್‌ ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ 14ನೇ ಕ್ರಮಾಂಕಕ್ಕೆ ತಲುಪಿದ್ದಾರೆ. ಕೆ.ಎಲ್‌.ರಾಹುಲ್ ಅವರನ್ನು ಹಿಂದಿಕ್ಕಿ ಕೊಹ್ಲಿ ಮುನ್ನುಗ್ಗಿದ್ದಾರೆ.

ಇಂಗ್ಲೆಂಡ್‌ ಎದುರಿನ ಸರಣಿಯ ಕೊನೆಯ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕೆ ಇಳಿದು 52 ಎಸೆತಗಳಲ್ಲಿ 80 ರನ್‌ ಗಳಿಸಿದ ಕೊಹ್ಲಿ ಈಗ ಗರಿಷ್ಠ ರ‍್ಯಾಂಕ್ ಹೊಂದಿರುವ ಭಾರತದ ಆಟಗಾರ ಎನಿಸಿದ್ದಾರೆ. ಅದೇ ಪಂದ್ಯದಲ್ಲಿ ರೋಹಿತ್ ಶರ್ಮಾ 34 ಎಸೆತಗಳಲ್ಲಿ 64 ರನ್ ಗಳಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಕೊನೆಯ ಎರಡು ಪಂದ್ಯಗಳು ಮತ್ತು ಅಫಘಾನಿಸ್ತಾನ-ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಸರಣಿಯನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು ಎಂದು ಐಸಿಸಿ ತಿಳಿಸಿದೆ.

ಭಾರತದ ಶ್ರೇಯಸ್ ಅಯ್ಯರ್ ಐದು ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ 26ನೇ ಸ್ಥಾನಕ್ಕೆ ಏರಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ‍‍ಪಂತ್‌ 11 ಸ್ಥಾನಗಳ ಏರಿಕೆಯೊಂದಿಗೆ 69ಕ್ಕೇರಿದ್ದರೆ ಸೂರ್ಯಕುಮಾರ್ ಯಾದವ್ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ಎದುರಿನ ಕೊನೆಯ ಪಂದ್ಯದಲ್ಲಿ 15 ರನ್‌ಗಳಿಗೆ ಎರಡು ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದ ವೇಗಿ ಭುವನೇಶ್ವರ್ ಕುಮಾರ್ 21 ಸ್ಥಾನಗಳ ಏರಿಕೆಯೊಂದಿಗೆ 24ರಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ 47 ಸ್ಥಾನಗಳ ಏರಿಕೆ ಕಂಡಿದ್ದು 78ರಲ್ಲಿದ್ದಾರೆ.

ಏಕದಿನ ರ‍್ಯಾಂಕಿಂಗ್‌ನಲ್ಲಿ ಶಿಖರ್ ಧವನ್ 15 ಹಾಗೂ ಭುವನೇಶ್ವರ್ ಕುಮಾರ್ 20ನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಕ್ರಮವಾಗಿ ಎರಡು ಹಾಗೂ ಐದು ಸ್ಥಾನಗಳ ಏರಿಕೆ ಕಂಡಿದ್ದಾರೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ 98 ರನ್ ಗಳಿಸಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: