ದೇಶಪ್ರಮುಖ ಸುದ್ದಿ

ನೆರೆಮನೆಯವರಿಗೆ ನಾವು ನಾಮಕರಣ ಮಾಡಲು ಸಾಧ್ಯವೇ? ಚೀನಾಗೆ ವೆಂಕಯ್ಯ ನಾಯ್ಡು ಪ್ರಶ್ನೆ

ನವದೆಹಲಿ: ಭಾರತದ ನಗರಗಳಿಗೆ ಮರುನಾಮಕರಣ ಮಾಡಲು ಚೀನಾಗೆ ಯಾವುದೇ ಹಕ್ಕಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಟಿಬೆಟ್ ಗಡಿಗೆ ಹೊಂದಿಕೊಂಡಿರುವ ಭಾರತದ ಪೂರ್ವೋತ್ತರ ರಾಜ್ಯ ಅರುಣಾಚಲ ಪ್ರದೇಶದ 10 ನಗರಗಳ ಹೆಸರನ್ನು ಚೀನಾ ಏಕಪಕ್ಷೀಯವಾಗಿ ಬದಲಾಯಿಸಿ ಹೊಸ ಅಧಿಕೃತ ನಕ್ಷೆ ಬಿಡುಗಡೆ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಯ್ಡು, “ಭಾರತದ ನಗರಗಳ ಹೆಸರು ಬದಲಾಯಿಸಲು ಯಾವುದೇ ವಿದೇಶಿ ರಾಷ್ಟ್ರಕ್ಕೆ ಹಕ್ಕಿಲ್ಲ” ಎಂದರು.

“ಅರುಣಾಚಲ ಪ್ರದೇಶದ ಪ್ರತಿ ಇಂಚು ಭೂಮಿಯೂ ಭಾರತಕ್ಕೆ ಸೇರಿದ್ದು. ಚೀನಾ ಮಾರುನಾಮಕರಣ ಮಾಡಿದರೆ ಪ್ರಯೋಜನವೇನು? ಇದೊಂದು ರೀತಿ ನೆರೆಮನೆಯವರ ಹೆಸರನ್ನು ನಾವು ಬದಲಾಯಿಸಿದಂತೆ. ವಾಸ್ತವದಲ್ಲಿ ಹೆಸರು ಬದಲಾಗುವುದಿಲ್ಲ ಎಂಬುದೆ ಸತ್ಯ. ಇತ್ತೀಚೆಗೆ ದಲೈ ಲಾಮಾ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ ಕಾರಣ ಅರುಣಾಚಲವನ್ನು ವಿವಾದಿತ ಪ್ರದೇಶ ಎಂದು ಬಿಂಬಿಸಿ ಭಾರತಕ್ಕೆ ಸಂದೇಶ ರವಾನಿಸುವುದು ಚೀನಾದ ತಂತ್ರವಾಗಿದೆ ಎಂದರು.

1962ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿದ ಕಾಲದಿಂದಲೂ ಭಾರತ ಮತ್ತು ಚೀನಾ ಗಡಿ ನಿರ್ಣಯಿಸಿ ವಿವಾದ ಬಗೆಹರಿಸುವಲ್ಲಿ ಸೋತಿವೆ. ಏಷ್ಯಾ ಖಂಡದ ಶಕ್ತಿಕೇಂದ್ರಗಳಾದ ಭಾರತ ಮತ್ತು ಚೀನಾ ನಡುವೆ ವಾರ್ಷಿಕ 66 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ನಾಯ್ಡು ಹೇಳಿಕೆ ಸಮತೋಲನ ಕಾಯ್ದುಕೊಂಡಿದೆ.

ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೇ ಅವರು ಹೇಳಿಕೆ ನೀಡಿ, “ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ. ನಮ್ಮ ನಗರಗಳಿಗೆ ಚೀನಾ ಮರುನಾಮಕರಣ ಅಥವಾ ಹೊಸ ನಾಮಕರಣ ಮಾಡಿದ ಮಾತ್ರಕ್ಕೆ ಅದು ಅಧಿಕೃತವಾಗುವುದಿಲ್ಲ” ಎಂದಿದ್ದಾರೆ.

ಈ ಕುರಿತು ಚೀನಾ ಸರ್ಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ “ಚೀನಾ ಈ ವಿಷಯದ ಬಗ್ಗೆ ಭಾರತವನ್ನು ಅಧಿಕೃತವಾಗಿ ಸಂಪರ್ಕಿಸಿ ಮಾಹಿತಿ ನೀಡಿಲ್ಲ. ಮಾಧ್ಯಮ ವರದಿಗಳನ್ನು ನಾವು ನೋಡುತ್ತಿದ್ದೇವೆಯಷ್ಟೇ ಎಂದು ಬಾಗ್ಲೇ ತಿಳಿಸಿದ್ದಾರೆ.

ಆದರೆ ಟಿಬೆಟ್ ನೊಂದಿಗೆ ನಿಕಟ ಸಾಂಸ್ಕೃತಿಕ ಸಂಬಂಧ ಹೊಂದಿರುವ ಕಾರಣ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಹೆಸರಿಸಿರುವ ಚೀನಾ, ತನ್ನ ನಡೆ ಕಾನೂನು ಬದ್ಧವಾಗಿದೆ ಎಂದು ಘೋಷಣೆ ಮಾಡಿದೆ.

ಚೀನಾದ ಈ ನಡೆ ಈ ವಲದಯಲ್ಲಿ ಭಾರತದ ಭದ್ರತೆಗೆ ಮುಂದೆ ಬಹುದೊಡ್ಡ ಅಪಾಯ ತಂದೊಡ್ಡಬಹುದು ಎಂದು ರಕ್ಷಣಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

(ಎನ್.ಬಿ.ಎನ್)

Leave a Reply

comments

Related Articles

error: