ಪ್ರಮುಖ ಸುದ್ದಿಮೈಸೂರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲವು ನೀತಿಗಳಿಂದ ಪ್ರಾದೇಶಿಕತೆಗೆ ಧಕ್ಕೆ : ತಮ್ಮದೇ ಸರ್ಕಾರದ ವಿರುದ್ಧ ಸಚಿವ ಮಾಧುಸ್ವಾಮಿ ಅಸಮಾಧಾನ

ಮೈಸೂರು, ಮಾ.27:- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೆಲವು ನೀತಿಗಳಿಂದ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮದೇ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಇಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಬಿ.ಎಸ್.ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದಮಣ್ಣಿ ಸಿದ್ದಲಿಂಗಶೆಟ್ಟರ ದತ್ತಿ, ಸಿದ್ದನಂಜಪ್ಪ ದತ್ತಿ, ಶಾಂತಾದೇವಿ ಸಿದ್ದನಂಜಪ್ಪ ದತ್ತಿ ವತಿಯಿಂದ “ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ” ವಿಷಯದ ಬಗ್ಗೆ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದಲ್ಲಿ ಸಾರ್ವಭೌಮ ಹಾಗೂ ಸರ್ವಾಧಿಕಾರಿ ಧೋರಣೆ ಶುರುವಾಗಿರುವುದು ಏಕತೆಗೆ ಭಾರೀ ದೊಡ್ಡ ಆತಂಕ. ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದಾಗಿ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಇಲಾಖೆಗಳು ನಿಧಾನವಾಗಿ ಕೇಂದ್ರದ ಕೈ ಸೇರುತ್ತಿದ್ದು, ಎಲ್ಲವೂ ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣ ಆಗುತ್ತಿದೆ ಎಂದು ಹೇಳಿದರು.

ಸರ್ವಾಧಿಕಾರಿ ಧೋರಣೆಯಿಂದ ಎಂದಿಗೂ ಪ್ರಾದೇಶಿಕ ಸ್ವಾತಂತ್ರ್ಯಕ್ಕೆ ಒಳಿತಾಗುವುದಿಲ್ಲ. ಅಲ್ಲದೆ ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ಉತ್ತಮ ಪರಿಸ್ಥಿತಿಯಲ್ಲಿರುವವರಿಗೆ ಇನ್ನಷ್ಟು ಸವಲತ್ತುಗಳನ್ನು ನೀಡುತ್ತಿವೆ. ಸ್ವಾತಂತ್ರ್ಯ ಬಂದಾಗ 16 ರಾಜ್ಯಗಳಿದ್ದವು. ಆದರೆ ಈಗ 29 ರಾಜ್ಯಗಳಿವೆ. ಎಲ್ಲ ರಾಜ್ಯಗಳಲ್ಲಿಯೂ ಅಭಿವೃದ್ಧಿ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುವ ಕಾರಣ ಮಿಕ್ಕ ಜಿಲ್ಲೆಗಳು ಬೇರೆ ರಾಜ್ಯ ಕೇಳುತ್ತಿವೆ. ಉತ್ತರ ಕರ್ನಾಟಕ ವಿಚಾರದಲ್ಲಿಯೂ ಇದೇ ಆಗಿದೆ, ತೆಲಂಗಾಣ ರಾಜ್ಯ ಸೃಷ್ಟಿಯಾಗಲೂ ಇದೇ ಕಾರಣ ಎಂದು ಹೇಳಿದರು.

ಕರ್ನಾಟಕದಲ್ಲಿ ಇರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ. ತುಮಕೂರಿನಲ್ಲಿ ಪ್ರಧಾನಿ ಉದ್ಘಾಟನೆ ಮಾಡಿದ ಫುಡ್ ಪಾರ್ಕ್, ಬೆಂಗಳೂರಿನಲ್ಲಿರುವ ಕಂಪನಿಗಳು. ಹೀಗೆ ಎಲ್ಲಿಯೂ ಕನ್ನಡಿಗರಿಗೆ ಆದ್ಯತೆ ಇದೆ. ಜಾಗ, ಸೌಲಭ್ಯ ಎಲ್ಲವೂ ನಮ್ಮದಾದರೂ ಉದ್ಯೋಗ ಮಾತ್ರ ಬೇರೆಯವರಿಗೆ ಸೇರಿದೆ. ಇದರ ವಿರುದ್ಧ ತಮಿಳುನಾಡಿನಂತಹ ರಾಜ್ಯಗಳು ಹೋರಾಟ ಮಾಡಿ ತಮ್ಮ ರಾಜ್ಯದವರಿಗೆ ಅನುಕೂಲವಾಗುವಂತೆ ಮಾಡಿದವು. ಆದರೆ ಕರ್ನಾಟಕದ ಜನರು ಹೋರಾಟ ಮಾಡುವುದಿಲ್ಲ. ಏಕೆಂದರೆ ನಾವು ರಾಷ್ಟ್ರೀಯವಾದಿಗಳು ಎಂದು ವ್ಯಂಗ್ಯವಾಡಿದರು.

ಕ್ರೈಸ್ತ ಧರ್ಮದ ಪ್ರತಿಪಾದನೆ ಬಸವಣ್ಣನ ತತ್ವಗಳಿಗೆ ಹತ್ತಿರವಾದದ್ದು. ಅವರು ಆಮಿಷಗಳನ್ನು ತೋರಿಸಿ ಧಾರ್ಮಿಕವಾಗಿ ತುಳಿತಕ್ಕೆ ಒಳಗಾಗಿದ್ದವರನ್ನು ತಮ್ಮ ಧರ್ಮಕ್ಕೆ ಕರೆಸಿಕೊಂಡರೆ ಬಸವಣ್ಣ ಅವರಿಗೆ ಸಮಾನತೆ ಒದಗಿಸಿಕೊಡಲು ಆ ಕೆಲಸ ಮಾಡಿದರು. ಆದರೆ ಇಂದು ಬಸವಣ್ಣನ ಅನುಯಾಯಿಗಳಲ್ಲೇ ಸಾಕಷ್ಟು ಭೇದಗಳಿವೆ, ಭಿನ್ನಾಭಿಪ್ರಾಯ ಹಾಗೂ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕಾದುದು. ನಮ್ಮ ಕರ್ತವ್ಯ ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಎಸ್‍ವಿವೈಎಂ ಸಂಸ್ಥಾಪಕ ನಿರ್ದೇಶಕ ಡಾ.ಆರ್.ಬಾಲಸುಬ್ರಹ್ಮಣ್ಯಂ , ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಡಾ.ಕಮಲ ಕುಮಾರಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: