ಮೈಸೂರು

ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ : ಜಿ.ನಾರಾಯಣಸ್ವಾಮಿ

ಅದೃಷ್ಟ ಯಶಸ್ಸಿನ ಜೊತೆ ಇರುವುದಿಲ್ಲ. ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು ವರ್ಷಕ್ಕೊಮ್ಮೆ ಜರುಗದೇ ನಿರಂತರವಾಗಿ ನಡೆಯುತ್ತಿದ್ದರೆ ಉತ್ತಮ ಯಶಸ್ಸು ಸಿಗುತ್ತದೆ ಎಂದು ಬೆಂಗಳೂರಿನ ಸೇವಾ ತೆರಿಗೆ ಆಯುಕ್ತ ಜಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುವ ಸಲುವಾಗಿ ಪ.ಜಾತಿ/ ಪ.ವರ್ಗ ವಿಶೇಷ ಘಟಕ, ಶತಮಾನೋತ್ಸವ ಭವನ, ಮೈಸೂರು ವಿವಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ಮಾನಸಗಂಗೋತ್ರಿ ಇವರ ಜಂಟಿ ಆಶ್ರಯದಲ್ಲಿ ಶುಕ್ರವಾರ ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಬೌದ್ಧಿಕ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಂಡು ಸಾಧನೆ ಮಾಡಿ. ಸತತ ಪರಿಶ್ರಮ ಪ್ರತಿಫಲ ನೀಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಮೈಸೂರು ವಿವಿಗೂ ನನಗೂ ಅವಿನಾಭಾವ ಸಂಬಂಧವಿದೆ. ಈ ಘನ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದಕ್ಕೆ ನನಗೆ ಹೆಮ್ಮೆ ಮತ್ತು ಗೌರವ ಇದೆ ಎಂದರು. ಇಂದು ನಾಗರಿಕ ಸೇವಾ ದಿನ. ಅಂದು ಈ ದಿನವನ್ನು ಜಾರಿಗೆ ತಂದ ಸರದಾರ್ ವಲ್ಲಭಬಾಯ್ ಪಟೇಲ್ ರವರಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ಮೈಸೂರು ವಿವಿಯ ಕುಲಪತಿ ಪ್ರೊ.ದಯಾನಂದ ಮಾನೆ ಮಾತನಾಡಿ, ಹಳ್ಳಿಗಾಡಿನಿಂದ ಬರುವ ವಿದ್ಯಾರ್ಥಿಗಳಿಗೆ ಕೌಶಲ್ಯ ಇದ್ದರೂ ಸಹ ಮಾಹಿತಿಯ ಕೊರತೆಯಿಂದಾಗಿ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ‍್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯದ ಬಗ್ಗೆ ಸಂಪೂರ್ಣ ಪರಿಣಿತಿ ಹೊಂದಬೇಕು. ಜೊತೆಗೆ ಸಾಮಾನ್ಯ ಜ್ಞಾನವೂ ಇರಬೇಕು. ಯಶಸ್ವಿ ಬದುಕಿಗೆ ಅಡ್ಡ ದಾರಿಗಳಿಲ್ಲ. ನಾವು ಎಷ್ಟೇ ಉನ್ನತ ಸ‍್ಥಾನಕ್ಕೇರಿದರೂ ನಮ್ಮ ಮೂಲವನ್ನು ಮರೆಯಬಾರದು. ಹೃದಯವಂತಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಮೈಸೂರು ವಿವಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ಕೋಚಿಂಗ್ ಸೆಂಟರ್ ನ್ನು ಸ್ಥಾಪಿಸುವ ಉದ್ದೇಶದಿಂದ 5 ಕೋಟಿ ರೂ. ಬಜೆಟ್ ನೀಡುವಂತೆ ರಾಜ್ಯ ಸರ್ಕಾರ ಮತ್ತು ಹಣಕಾಸು ಮಂತ್ರಿಗಳಿಗೆ ಮನವಿ ಮಾಡಲಾಗಿದೆ. ದಿನದ 24 ಗಂಟೆಯೂ ಗ್ರಂಥಾಲಯ ತೆರೆದಿರುವಂತೆ ಯೋಜನೆ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿದ್ದೇವೆ ಎಂದು ತಿಳಿಸಿದರು.

ಮುಖ‍್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಇಂದು ಯುವಕರಿಗೆ ಅನೇಕ ಅವಕಾಶಗಳು ಲಭ್ಯವಿವೆ. ಸಿಕ್ಕ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ನಿಮ್ಮ ಜೀವನದ ಗುರಿಯನ್ನು ನೀವೆ ನಿರ್ಧರಿಸಿಕೊಂಡು ಮುಂದೆ ಸಾಗಿ. ಪರಿಶ್ರಮವೊಂದೇ ಯಶಸ್ಸಿನ ಕೀಲಿಕೈ. ಸಾಧನೆಯ ಹಾದಿಯಲ್ಲಿ  ಸಾಗಬೇಕಾದರೆ ಸಿದ್ಧತೆಯೂ ಮುಖ್ಯವಾಗುತ್ತದೆ. ತಪ್ಪು ದಾರಿಗಿಳಿಯದೇ, ನಾಯಕತ್ವದ ಗುಣ ಬೆಳೆಸಿಕೊಂಡು ನಿರ್ದಿಷ್ಟ ಗುರಿಯನ್ನು ತಲುಪಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಾಧ್ಯಾಪಕ ಡಾ.ಬಾಲಸುಬ್ರಮಣಿಯನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ.ಜಾ. ಮತ್ತು ಪ.ವರ್ಗ ವಿಶೇಷ ಘಟಕದ  ಉಪಕುಲಸಚಿವ ಡಾ.ಎಸ್.ಮಹದೇವಮೂರ್ತಿ, ಮೈಸೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ರುದ್ರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: