ಮೈಸೂರು

ಏ.4 : ಸಾಹಿತಿ ಎಂ.ಬಿ ಸಂತೋಷ್ ಅಭಿನಂದನಾ ಸಮಾರಂಭ

ಮೈಸೂರು,ಮಾ.29:- ಮೈಸೂರು ಸಾಹಿತಿ ಎಂ.ಬಿ ಸಂತೋಷ್ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಏ.4 ರಂದು ಭಾನುವಾರ ನಗರದ ಗಾನಭಾರತಿ   ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಂ . ಬಿ ಸಂತೋಷ್ ಅವರು ಪ್ರಸ್ತುತ ಸಂದರ್ಭದ ಸಾಹಿತ್ಯದ ಲೋಕಕ್ಕೆ ಹಾಗೂ ಹಲವು ಸಾಧಕರ ಸುವರ್ಣ ಬದುಕಿಗೆ ಪ್ರೇರಕ ,ಪೂರಕ ಶಕ್ತಿ. ಸಾಹಿತ್ಯ ಲೋಕದಲ್ಲಿ ಛಲದಂಕಮಲ್ಲನೆನಸಿಕೊಂಡ ಎಂ . ಬಿ . ಸಂತೋಷ್ ಅವರು ಉಪಜೀವನಕ್ಕಾಗಿ ಕಂಡುಕೊಂಡ ವೃತ್ತಿ  ಶೀಘ್ರಲಿಪಿ . ತನ್ನಲ್ಲಿ ಸುಪ್ತವಾಗಿರುವ ಭಾವನೆಗಳನ್ನು ಪ್ರಕಟಪಡಿಸಲು, ತಾನು ಹಿಡಿದಿರುವ ಪ್ರವೃತ್ತಿ ಸಾಹಿತ್ಯ , ಬದುಕಿನ ಬಂಡಿಯೊಂದಿಗೆ ಸಾಹಿತ್ಯವೆಂಬ ಚಿನ್ನದ ಚೌಕಟ್ಟಿನಲ್ಲಿ ಹೊರಹೊಮ್ಮಿದ ಅವರ ಬರಹಗಳು ವಿಭಿನ್ನ , ಕಾವ್ಯ , ಆಧುನಿಕ ವಚನಗಳು , ಮುಕ್ತಕಗಳು , ಚುಟುಕು , ಹನಿಗವನ , ಸಣ್ಣಕಥೆಗಳು , ನೀತಿಕಥೆಗಳು , ಶಿಶುಗೀತೆಗಳು , ಲೇಖನ , ಕಲಾಪ್ರಕಾರಗಳು ಸಾಮಾಜಿಕ ಕಾದಂಬರಿಗಳು , ಭಕ್ತಿ ಗೀತೆಗಳ ಸಂಕಲನಗಳು ಜೊತೆಗೆ ಜನಜಾಗೃತಿಗಾಗಿ ಕಂಡುಕೊಂಡ ಕೆಲಸ ಕಾರ್ಯಗಳು ಸಾಕಷ್ಟು , ಈ ಎಲ್ಲಾ ಕೈಂಕರ್ಯಗಳು ಅವರ ಮನಸ್ಸಿಗೆ ತೃಪ್ತಿ ಮತ್ತು ಮುದನೀಡಿವೆ . ತಾವು ನಡೆಸುವ ಕೆಲಸದ ಸಾರ್ಥಕತೆಯನ್ನೂ ಮನದಟ್ಟು ಮಾಡಿವೆ . ಅಲ್ಲದೆ  ಈ ಸಾಹಿತ್ಯ ಪ್ರಕಾರಗಳ ಬರವಣಿಗೆಯ ಶೈಲಿಯಲ್ಲಿ ಜೇನಿನ ಸಿಹಿತನವಿದೆ . ಸಮಕಾಲೀನ ಪ್ರಜ್ಞೆಯೊಂದಿಗೆ ಸಂಸ್ಕೃತಿಯ ಪ್ರೇಮವಿದೆ . ಜಾನಪದೀಯ ಸೊಗಡಿನೊಂದಿಗೆ ಇತಿಹಾಸವನ್ನು ವೈಭವೀಕರಿಸುವ ಜಾಣ್ಮೆಯಿದೆ. ಕನ್ನಡತ್ವದ ನೆಲೆ – ಬೆಲೆಗಳಲ್ಲಿ ಕನ್ನಡವನ್ನು ಕಟ್ಟುವ , ಬೆಳೆಸುವ , ಪಸರಿಸುವ ವೀರನಿಷ್ಠೆ,  ಕನ್ನಡದ ಸ್ಥಾನ – ಮಾನವನ್ನು ಮತ್ತಷ್ಟು , ಮಗದಷ್ಟು ಭದ್ರಪಡಿಸಬೇಕಾದ ದಿನಗಳಲ್ಲಿ , ಉದಯೋನ್ಮಖ ಬರಹಗಾರರಿಗೆ ಹುರಿದುಂಬಿಸಿ, ಪ್ರೇರೇಪಿಸಿ, ಪ್ರೋತ್ಸಾಹಿಸುವ ಕೈಂಕರ್ಯದ ಹಿನ್ನೆಲೆಯಲ್ಲಿ ಮಹಾನ್ ಶಕ್ತಿಯಿದೆ. ಈ ಹಿನ್ನೆಲೆಯಲ್ಲಿ ತನ್ನಲ್ಲಿ ಹುದುಗಿದ್ದ ಸಾಹಿತ್ಯ ಸಾಮರ್ಥ್ಯ ಒಂದೆಡೆ ಗರಿಗೆದರಿಕೊಂಡರೆ,  ಮತ್ತೊಂದೆಡೆ ಕನ್ನಡದ ಅಭಿಮಾನ, ಮಗದೊಂದು ಕಡೆ ಸಮಾಜಮುಖಿಯಾದ ಕೆಲಸಕಾರ್ಯಗಳನ್ನು ಮೆಚ್ಚಿ , ಹಲವು ಕ್ಷೇತ್ರದ ಕಾಯಕ ಯೋಗಿಗಳಿಗೆ ನೀಡಿದ ಪ್ರಶಸ್ತಿಗಳು ಸಾವಿರಾರು. ಅವರ ಸಾಧನೆಯ ಹಾದಿಯಲ್ಲಿ ತನ್ನ ಮುಡಿಗೇರಿಸಿಕೊಂಡ ಪ್ರಶಸ್ತಿಗಳು ಸಾಕಷ್ಟು . ಇವೆಲ್ಲಾ ಅವರ ಮನೋಧರ್ಮಗಳಾಗಿ ಹೊರಹೊಮ್ಮಿವೆ . ವೃತ್ತಿ ಮತ್ತು ಪ್ರವೃತ್ತಿಗಳೆರಡು ವಿಭಿನ್ನ ದಿಕ್ಕುಗಳಲ್ಲಿದ್ದರೂ ಸರಳ ಸಜ್ಜನಿಕೆ , ಸಹೃದಯತೆ, ಮಾನವೀಯ ಗುಣಗಳಿಂದ ಮೇಳೈಸಿದ ಮಹಾನ್ ವ್ಯಕ್ತಿ . ಜನ ಜಾಗೃತಿಗೊಳಿಸುವಂತಹ ಸಮಾಜಮುಖಿ ಮನಸ್ಥಿತಿಯಲ್ಲಿ ಅನಂತ ಶಕ್ತಿ . ಹೀಗಾಗಿ ಜಗಜೀವನದ ವಿಕಾಸದಲ್ಲಿ ಇತಿಹಾಸ ನಿರ್ಮಾಣದಲ್ಲಿ , ಮಾನವನ ಬದುಕಿನ ಬೆಳವಣಿಗೆಯಲ್ಲಿ   ಎಂ . ಬಿ . ಸಂತೋಷ್ ಅಂತಹ ಸಾಧಕರ ಜೀವನ ಚರಿತ್ರೆಗಳ ಪಾತ್ರ ಅಪಾರ , ಅನಿವಾರ್ಯವೆಂಬುದಂತೂ ದಿಟ . ಸಾರಸ್ವತ ಲೋಕಕ್ಕೆ ಅಸ್ತಿಯಾಗಬಲ್ಲ ಚೇತನ ಶಕ್ತಿಯಾದ ಸಂತೋಷ್ ಅವರ ಸಾಧನೆಗಳ ಕನಸುಗಳು ನನಸಾಗಲಿ. ಶ್ರಮ ಸಾರ್ಥಕವಾಗಲಿ ಕೀರ್ತಿ ಅಜರಾಮರವಾಗಲಿ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: