ಕರ್ನಾಟಕಪ್ರಮುಖ ಸುದ್ದಿ

ಧಾರ್ಮಿಕ ಉತ್ಸವ,ಜಾತ್ರೆ ಮೇಳಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ : ನಾಲ್ವರಲ್ಲಿ ಕೋವಿಡ್ ಪತ್ತೆ

ರಾಜ್ಯ( ಚಾಮರಾಜನಗರ)ಮಾ.30:- ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕ ಸ್ಥಳ, ಮೈದಾನ, ಉದ್ಯಾನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳಲ್ಲಿ, ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿ, ಷಬ್-ಎ-ಬರಾತ್, ಗುಡ್ ಫ್ರೈಡೆ ಇತ್ಯಾದಿ ಹಬ್ಬಗಳ ಧಾರ್ಮಿಕ ಉತ್ಸವಗಳೊಂದಿಗೆ ಜಾತ್ರೆ ಮೇಳಗಳು ನಡೆಸುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.

ಕೋವಿಡ್-19 ಷರತ್ತುಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 50ರಿಂದ 60ರ ಅಡಿ ಸೇರಿದಂತೆ ವಿವಿಧ ಕಾನೂನುಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ನಾಲ್ಕು ಮಂದಿಗೆ ಕೋವಿಡ್‌-19 ಇರುವುದು ದೃಢಪಟ್ಟಿದೆ. ಇಬ್ಬರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು 36 ಇವೆ. 921 ಮಂದಿಯ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, 917 ಮಂದಿಯ ವರದಿ ನೆಗೆಟಿವ್‌ ಬಂದಿದೆ. ಚಾಮರಾಜನಗರ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯೊಂದರ ಇಬ್ಬರು ಶಿಕ್ಷಕರಲ್ಲಿ ಕೋವಿಡ್‌ ದೃಢಪಟ್ಟಿದೆ.

ಡಿಡಿಪಿಐ ಎಸ್‌.ಟಿ.ಜವರೇಗೌಡ ಇದನ್ನು ದೃಢಪಡಿಸಿದ್ದು, ಬೋಧಕರು ಶಾಲೆಗೆ ಬಂದಿರಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಶಿಕ್ಷಕರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: