ಮೈಸೂರು

ಅಂಬೇಡ್ಕರ್ ಭವನ ಉದ್ಘಾಟನೆಗೆ ಇನ್ನೆಷ್ಟು ಸರ್ಕಾರ ಬದಲಾಗಬೇಕು?

ಮೈಸೂರು,ಮಾ.30:- ಮೈಸೂರು ನಗರ ದೇವರಾಜ ಮೊಹಲ್ಲಾದ ದೇವರಾಜ ಪೊಲೀಸ್ ಠಾಣೆ ಸಮೀಪದ 7.470 ಚ.ಮೀ.ವಿಸ್ತೀರ್ಣದಲ್ಲಿ 14.6ಕೋ.ರೂ.ವೆಚ್ಚದಲ್ಲಿ ರಾಜ್ಯದಲ್ಲೇ ಅತಿ ದೊಡ್ಡ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2012ಮೇ.4ರಂದು ಆಡಳಿತಾತ್ಮಕ ಅನುಮೋದನೆ ದೊರೆತು ಕಾಮಗಾರಿ ಆರಂಭವಾಗಿತ್ತು. ಮೈಸೂರು ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸದ್ಯಕ್ಕೆ ಮುಕ್ತಿ ದೊರೆಯುವ ಲಕ್ಷಣಗಳೇ ಕಾಣಿಸುತ್ತಿಲ್ಲವೆಂದು ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರಾದ ಎಂ.ನಾಗರಾಜು ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಮಗಾರಿ ಆರಂಭಗೊಂಡು ಬರೋಬ್ಬರಿ 9ವರ್ಷ ಕಳೆದರೂ ಭವನ ನಿರ್ಮಾಣದ ಕಾಮಗಾರಿ ಕುಂಟುತ್ತಾ ಸಾಗಿದೆ. ಈಗಾಗಲೇ ಭವನದ ಮೊದಲನೇ ಹಂತದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಎರಡನೇ ಹಂತದ ಕಾಮಗಾರಿ ಸರ್ಕಾರ ಇನ್ನೂ ಅನುಮೋದನೆ ನೀಡದ ಕಾರಣ ಮತ್ತಷ್ಟು ವಿಳಂಬವಾಗಲಿದೆ. ಅಂಬೇಡ್ಕರ್ ಭವನದ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಎರಡನೇ ಹಂತದಲ್ಲಿ 20ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಲಾಗಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿ ಕಾಮಗಾರಿ ಆರಂಭಿಸಲಾಗುವುದು, ಬೇಸ್ ಮೆಂಟ್, ನೆಲಮಹಡಿ, ಮೊದಲ ಅಂತಸ್ತು ಎರಡನೇ ಮಹಡಿ ನಿರ್ಮಿಸಲು ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳಿಸಲು 18ತಿಂಗಳ ಅವಧಿ  ನ ನಿಗದಿಪಡಿಸಲಾಗಿತ್ತು. ಆದರೆ 93 ತಿಂಗಳು ಕಳೆದರೂ ಪೂರ್ಣಗೊಂಡಿಲ್ಲ. ರಾಜ್ಯದಲ್ಲೇ ದೊಡ್ಡದಾದ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಆರಂಭಗೊಂಡು 9ವರ್ಷಗಳೇ ಕಳೆದು ಹೋಗಿದೆ. ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.,ಶ್ರೀನಿವಾಸ್ ಪ್ರಸಾದ್ ಅವರು ಮುಂದಿನ ಬಾರಿ ಅಂಬೇಡ್ಕರ್ ಜಯಂತಿಯನ್ನು ಇಲ್ಲಿಯೇ ಆಚರಿಸಬೇಕು. ಅಷ್ಟರೊಳಗೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಅವರು ಹೇಳಿದ ಹಲವು ಅಂಬೇಡ್ಕರ್ ಜಯಂತಿ ಬಂದು ಹೋದರೂ ಕಾಮಗಾರಿ ಮುಗಿದಿಲ್ಲ. ಸರ್ಕಾರದ ಕೈಲಾಗದ ಕೆಲಸಗಳಿಗೆ ನಮ್ಮ ಧಿಕ್ಕಾರವಿದೆ ಎಂದರು.

ರಾಜ್ಯದ ಜನತೆ  ಕಂಡಂತೆ ಹಲವಾರು ಕೆಲಸಕ್ಕೆ ಬಾರದ ಅನುಮೋದನೆಗಳನ್ನು, ಅನುದಾನಗಳನ್ನು ನೀಡುತ್ತಿರುವ ಸರ್ಕಾರ ಅಂಬೇಡ್ಕರ್ ಭವನ ಎಂದಾಕ್ಷಣ ತಾತ್ಸಾರ ತೋರುತ್ತದೆ. ಮಲತಾಯಿ ಧೋರಣೆ ಯಾಕೆ? ಅಂಬೇಡ್ಕರ್ ಭವನ ಉದ್ಘಾಟನೆಯಾಗಲು ಇನ್ನೆಷ್ಟು ಸರ್ಕಾರಗಳು ಬದಲಾಗಬೇಕು? ಎಂದು ಪ್ರಶ್ನಿಸಿದರು. ನಿಮಗೆ ಕಿಂಚಿತ್ ಆದರೂ ಸ್ವಾಭಿಮಾನವಿದ್ದಲ್ಲಿ ಭವನದ ವಿಷಯವನ್ನು ಕೂಡಲೇ ಇತ್ಯರ್ಥ ಮಾಡಿ. ಉದ್ಘಾಟನಾ ದಿನಾಂಕ ನಿಗದಿಪಡಿಸಿ, ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಅಧ್ಯಕ್ಷರಾದ ಉಮಾ ದ್ರಾವಿಡಿಯನ್,ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್, ಅಧ್ಯಕ್ಷ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: