ಮೈಸೂರು

ಸುಪ್ರೀಂ ಕೋರ್ಟ್ ನ ಮೀಸಲಾತಿ ಬಡ್ತಿ ಹಿಂಪಡೆತ ತೀರ್ಪು ವಿರೋಧಿಸಿ ಬೃಹತ್ ಪ್ರತಿಭಟನೆ

ಸುಪ್ರೀಂಕೋರ್ಟ್ ನ ಮೀಸಲಾತಿ ಬಡ್ತಿ ಹಿಂಪಡೆತ ತೀರ್ಪು ವಿರೋಧಿಸಿ ಮೈಸೂರು ವಿಭಾಗದ ಮೀಸಲಾತಿ ಸಂರಕ್ಷಣಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯನ್ನು ವಿವಿಧ ಅಹಿಂದಾ ವರ್ಗಗಳ ಗುರುಗಳು ಬೆಂಬಲಿಸಿದರು.

ಮೈಸೂರಿನ ಪುರಭವನದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಪ್ರತಿಭಟನಾಕಾರರು ರಾಜಕೀಯ, ಶೈಕ್ಷಣಿಕ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅವಶ್ಯವಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಲಭಿಸುವವರೆಗೂ ಹೋರಾಟ ಮಾಡುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ತುತ್ತನ್ನು ಕಿತ್ತುಕೊಳ್ಳುವ ಕೃತ್ಯಕ್ಕೆ ಮುಂದಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಲಿ, ರಾಜ್ಯ ಸರ್ಕಾರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಿ, ಮೀಸಲಾತಿ ಸಂರಕ್ಷಣಾ ಸಮಿತಿಗೆ ಜಯವಾಗಲಿ, ರಾಜ್ಯ ಸರ್ಕಾರ ಬಡ್ತಿ ಮೀಸಲಾತಿ ಉಳಿಸಲು ಸುಗ್ರೀವಾಜ್ಞೆ ತರಲಿ, ನ್ಯಾಯಾಂಗದಲ್ಲೂ ಮೀಸಲಾತಿ ಜಾರಿಯಾಗಲಿ ಎಂಬ ಹಲವಾರು ಘೋಷಣಾ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಮುಂದೆ ಸಾಗಿದರು.

ಪ್ರತಿಭಟನೆಯಲ್ಲಿ ಚಿತ್ರದುರ್ಗದ ಚೆಲುವಾದಿ ಮಹಾಸಂಸ್ಥಾನ ಬಸವ ನಾಗಿದೇವ ಶರಣರು, ಉರಿಲಿಂಗಿ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ, ಫಾದರ್ ಎಸ್.ಟಿ.ಜೋಸೆಫ್, ಮುಸ್ಲಿಂ ಗುರು ಅಜೀಂ ಚಿಸ್ಟಿ, ಹಾಗೂ ಕೊಳ್ಳೇಗಾಲ, ಚಾಮರಾಜನಗರ, ಪಿರಿಯಾಪಟ್ಟಣ ಸೇರಿದಂತೆ ಜಿಲ್ಲೆಯ ಹಿಂದುಳಿದ ವರ್ಗಗಳ ವಿವಿಧ ಸಂಘಟನೆಗಳು, ಕ್ರೈಸ್ತ, ಮುಸ್ಲಿಂ, ಚೆಲುವಾದಿ, ಮಡಿವಾಳ ಸಮುದಾಯಗಳು, ಪ್ರಗತಿಪರ ಚಿಂತಕರು ಸೇರಿದಂತೆ  ಹಲವಾರು ಮಂದಿ ಪಾಲ್ಗೊಂಡಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: