ಮೈಸೂರು

ನಾಳೆಯಿಂದ ಪಾಲಿಕೆಯಿಂದ ಪರಿಷ್ಕೃತ ತೆರಿಗೆ ಜಾರಿ : ಕಟ್ಟಡಕ್ಕೆ ಹೊಂದಿಕೊಂಡು ಖಾಲಿ ಜಾಗವಿದ್ದಲ್ಲಿ ಅದಕ್ಕೂ ಬೀಳಲಿದೆ ತೆರಿಗೆ

ಮೈಸೂರು,ಮಾ.31:-  ನಾಳೆಯಿಂದ ಅಂದರೆ ಏ.1ರಿಂದ ಮೈಸೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಪರಿಷ್ಕೃತ ಆಸ್ತಿ ತೆರಿಗೆ  ಅನುಷ್ಠಾನಕ್ಕೆ ಬರಲಿದ್ದು ಇನ್ನು ಮುಂದೆ ಕಟ್ಟಡಕ್ಕೆ ಹೊಂದಿಕೊಂಡ ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಕ್ಕೂ ತೆರಿಗೆ ಪಾವತಿಸಬೇಕಿದೆ.

ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976ರ ಕಲಂ 108, 109, ಮತ್ತು 109(ಎ) ಗಳಿಗೆ ತಿದ್ದುಪಡಿ ಮಾಡಿ ಶಾಸನವಾಗಿರುವಂತೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಪೌರಾಡಳಿತ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಮಾ.26ರಂದು ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಶೇ.15ರಷ್ಟು  ತೆರಿಗೆ ಹೆಚ್ಚಳಕ್ಕೆ ಅನುಮೋದನೆ ಪಡೆಯಲಾಗಿದೆ.  ಅದರಂತೆ ವಸತಿ, ವಾಣಿಜ್ಯ –ಎ, ಶಾಲೆ, ಕಾಲೇಜು, ಚಾರಿಟಬಲ್ ಟ್ರಸ್ಟ್ ಹಾಗೂ ಖಾಲಿ ನಿವೇಶನಗಳ ಮೇಲಿನ ಪರಿಷ್ಕೃತ  ತೆರಿಗೆ ನಾಳೆಯಿಂದ ಜಾರಿಯಾಗಲಿದೆ. ವಾಣಿಜ್ಯ-ಬಿ ಆಸ್ತಿಗಳಿಗೆ ತೆರಿಗೆ ಏರಿಕೆಯಿಂದ ವಿನಾಯಿತಿ ನೀಡಿದ್ದು 2020-21ನೇ ಸಾಲಿನ ತೆರಿಗೆಯೇ ಅನ್ವಯವಾಗಲಿದೆ.

ಕಟ್ಟಡಕ್ಕೆ   ಹೊಂದಿಕೊಂಡಿರುವ ಸಾವಿರ ಚದರ ಅಡಿಗಿಂತ ಹೆಚ್ಚಿರುವ ಖಾಲಿ ನಿವೇಶನಕ್ಕೆ ಇನ್ನು ಮುಂದೆ ಕಟ್ಟಡದ ಮೂಲ ಬೆಲೆಯ ಶೇ.0.2ರಷ್ಟು ತೆರಿಗೆ ವಿಧಿಸಲಾಗುತ್ತದೆ. 2005ರಲ್ಲಿ ಹೀಗೆ ಖಾಲಿ ನಿವೇಶನಕ್ಕೆ ತೆರಿಗೆ ವಿಧಿಸಲಾಗುತ್ತಿತ್ತು. ನಂತರದ ವರ್ಷಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರದ ಆದೇಶವನ್ನು ಪಾಲಿಸುವುದರ ಜೊತೆಗೆ ಸಾರ್ವಜನಿಕರಿಗೂ ಹೆಚ್ಚು ಹೊರೆಯಾಗದಂತೆ ತೆರಿಗೆ ನಿಗದಿಪಡಿಸಿರುವ ಕಾರಣ ಈ ರೀತಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವರೆಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಶೇ.50ರಷ್ಟನ್ನು ಪರಿಗಣಿಸಿ ಆಸ್ತಿ ತೆರಿಗೆ ನಿಗದಿಪಡಿಸಲಾಗುತ್ತಿತ್ತು. ಆದರೆ ಈ ಸಾಲಿನಲ್ಲಿ ಮಾರುಕಟ್ಟೆ ಮೌಲ್ಯದ ಶೇ.25ರಷ್ಟನ್ನು ಪರಿಗಣಿಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ 2020-21ನೇ ಸಾಲಿನ ತೆರಿಗೆ ಮೊತ್ತದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗಲಿದೆ.

ಕಳೆದ ಸಾಲಿನ ಬಾಕಿ ಇರುವ ಆಸ್ತಿ ತೆರಿಗೆಯನ್ನು ಆಯಾ ಸಾಲಿನ ದರದಂತೆ ಲೆಕ್ಕಾಚಾರ ಮಾಡಿ ಪಾವತಿಸಿಕೊಳ್ಳಬೇಕಾಗುತ್ತದೆ.  ಅಂದರೆ ಶೇ,15ರಷ್ಟು ತೆರಿಗೆ ಹೆಚ್ಚಳದಿಂದ ಬಾಕಿ ತೆರಿಗೆ ಮೊತ್ತದಲ್ಲಿ ವ್ಯತ್ಯಾಸವಾಗುವುದಿಲ್ಲ. ಮುಂದಿನ ಪರಿಷ್ಕರಣೆವರೆಗೆ  ಪ್ರತಿವರ್ಷ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆ ಮಾರ್ಗಸೂಚಿ ಬೆಲೆ ಆಧರಿಸಿ ನಿಯಮಾನುಸಾರ ತೆರಿಗೆ ಹೆಚ್ಚಿಸಲಾಗುತ್ತದೆ. ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳ ಪರಿಷ್ಕರಣೆ ಆಗದಿದ್ದರೆ ಕೌನ್ಸಿಲ್ ಅನುಮೋದನೆಯೊಂದಿಗೆ ಶೇ.3ರಿಂದ ಶೇ.5ರಷ್ಟು ಹೆಚ್ಚಳ ಮಾಡಲಾಗುತ್ತದೆ. ಮೂಲ ಆಸ್ತಿ ತೆರಿಗೆಗೆ ಶೇಕಡಾವಾರು ಪ್ರಮಾಣದಲ್ಲಿ  ನಿಗದಿಪಡಿಸಿರುವ ಉಪಕರ ದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಖಾಲಿ ನಿವೇಶನಗಳಿಗೆ ಈಗಾಗಲೇ ನಿಗದಿಯಾಗಿರುವ  ಸ್ವಚ್ಛತಾಶುಲ್ಕ ಪಾವತಿಸಬೇಕು ಎಂದು ಪ್ರಕಟಣೆ ತಿಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: