ಕರ್ನಾಟಕಪ್ರಮುಖ ಸುದ್ದಿ

ಸಿಡಿ ಪ್ರಕರಣ: ಸಂತ್ರಸ್ತ ಯುವತಿಯ ವೈದ್ಯಕೀಯ ಪರೀಕ್ಷೆ ಅಂತ್ಯ

ಬೆಂಗಳೂರು,ಮಾ.31- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ವೈದ್ಯಕೀಯ ಪರೀಕ್ಷೆ ಅಂತ್ಯಗೊಂಡಿದೆ.

ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಯುವತಿಯ ಕೋವಿಡ್ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡಿದೆ. ಯುವತಿಯ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಅಜ್ಞಾತ ಸ್ಥಳದಿಂದಲೇ ಆರೋಪ ಮಾಡುತ್ತಿದ್ದ ಯುವತಿ ನಿನ್ನೆ ನ್ಯಾಯಾಧೀಶರ ಮುಂದೆ ಹಾಜರಾಗಿ ಸಿಆರ್‍ಪಿಸಿ ಸೆಕ್ಷನ್ 164ರ ಅನುಸಾರ ಹೇಳಿಕೆ ದಾಖಲಿಸಿದ್ದರು. ಹೇಳಿಕೆ ದಾಖಲಿಸಿದ ಬಳಿಕ ಆಕೆಯನ್ನು ಎಸ್ಐಟಿ ತಂಡದವರು ಅಜ್ಞಾತ ಸ್ಥಳದಲ್ಲಿ ಇರಿಸಿದ್ದರು. ಇಂದು ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ತಪಾಸಣೆಯ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಚಿಕಿತ್ಸೆಗಾಗಿ ಬರುವ ರೋಗಿಗಳು, ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಉಳಿದವರಿಗೆ ಸೀಮಿತ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ವೈದ್ಯಕೀಯ ತಪಾಸಣೆ ಮುಗಿದ ಬಳಿಕ ಎಸ್ಐಟಿ ತಂಡ ಯುವತಿಯನ್ನು ಆಸ್ಪತ್ರೆಯಿಂದ ಆಡುಗೋಡಿಯ ತಾಂತ್ರಿಕ ಕೇಂದ್ರಕ್ಕೆ ಕರೆತಂದಿದ್ದಾರೆ. ಇಲ್ಲಿಂದ ಯುವತಿಯನ್ನು ಸ್ಥಳ ಮಹಜರಿಗೆ ಮಲ್ಲೇಶ್ವಂನಲ್ಲಿರುವ ಅಪಾರ್ಟ್ ಮೆಂಟ್ ಗೆ ಕರೆದೊಯ್ಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮಾ.2ರಂದು ಬೆಳಕಿಗೆ ಬಂದಿದ್ದ ಸಿಡಿ ಪ್ರಕರಣ ದಿನವೂ ಒಂದೊಂದು ತಿರುವು ಪಡೆಯುತ್ತಾ ಕುತೂಹಲ ಹೆಚ್ಚಿಸುತ್ತಿದೆ. ನಿನ್ನೆ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದ ಯುವತಿ ಈ ಮೊದಲು ವಕೀಲರ ಮೂಲಕ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದನ್ನು ಖಚಿತ ಪಡಿಸಿದ್ದು, ತಾವು ಈಗಲೂ ಆ ದೂರಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದಂತೆ ಕೆಲವು ಪುರಾವೆಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗುತ್ತಿದೆ. ಸಿಡಿಗಳನ್ನು ಯಾರು ಬಿಡುಗಡೆ ಮಾಡಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. (ಎಂ.ಎನ್)

Leave a Reply

comments

Related Articles

error: