ಪ್ರಮುಖ ಸುದ್ದಿಮೈಸೂರು

ಸಿಎಂ ವಿರುದ್ಧ ವರಿಷ್ಠರಿಗೆ ಪತ್ರ ಬರೆದ ಸಚಿವ ಕೆ.ಎಸ್.ಈಶ್ವರಪ್ಪ ಇದೀಗ ತಾಯಿ ಚಾಮುಂಡೇಶ್ವರಿಯಲ್ಲಿ ಮೊರೆ

ಮೈಸೂರು,ಏ.2:- ಗ್ರಾಮೀಣಾಭಿವೃದ್ದಿ ಇಲಾಖೆ ಅನುದಾನ ಬಿಡುಗಡೆ ವಿವಾದ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖಾ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದು, ಇದೀಗ  ತಾಯಿ ಚಾಮುಂಡೇಶ್ವರಿಯ ಮೊರೆ ಹೋಗಿದ್ದಾರೆ.

ಶುಕ್ರವಾರ ಕುಟುಂಬ ಸಮೇತ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆ ವಿವಾದ ಸಂಬಂಧಿಸಿದಂತೆ ಕೆ.ಎಸ್‌‌.ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ಹಿನ್ನೆಲೆಯಲ್ಲಿ ಕೆ.ಎಸ್.ಈಶ್ವರಪ್ಪಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಶುರುವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ  ವಿರುದ್ದ ರಾಜ್ಯಪಾಲರಿಗೆ ದೂರು ನೀಡಿರುವ ಈಶ್ವರಪ್ಪ ನಡೆಗೆ ಮುಖ್ಯಮಂತ್ರಿಗಳ ಆಪ್ತ ಸಚಿವ, ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈಶ್ವರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಸಹಿ ಸಂಗ್ರಹ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಮತ್ತೆ ನಿರಾಕರಿಸಿದ ಸಚಿವರು ಚಾಮುಂಡೇಶ್ವರಿ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿ ತೆರಳಿದರು. ರಾಜ್ಯರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಸಿಎಂ ಪುತ್ರ ವಿಜಯೇಂದ್ರ ಟ್ವಿಟ್ ಬಗ್ಗೆ ಎಲ್ಲ ಬೆಳವಣಿಗೆಗಳ ಬಗ್ಗೆ ಮದ್ಯಾಹ್ನ ಪ್ರತಿಕ್ರಿಯೆ ನೀಡುತ್ತೇನೆ ಎಂದು ತೆರಳಿದರು.

ಚಾಮುಂಡೇಶ್ವರಿ ಸನ್ನಿಧಿಗೆ ಈಶ್ವರಪ್ಪನವರು ಪತ್ನಿ, ಪುತ್ರ ಸೊಸೆ ಮೊಮ್ಮಕ್ಕಳೊಂದಿಗೆ  ಭೇಟಿ ನೀಡಿ ಪೂಜೆ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: