ಮೈಸೂರು

ಪಾದಚಾರಿಗಳು ಓಡಾಡುವ ರಸ್ತೆಯ ಮೇಲಿರುವ ತೆಂಗಿನ ಮರ ಮತ್ತು ಹೂದೋಟವನ್ನು ತೆರವುಗೊಳಿಸುವಂತೆ ಸುಧಾಕರ್ ಶೆಟ್ಟಿ ಮನವಿ

ಮೈಸೂರು,ಏ.,2:- ಮೈಸೂರು ನಗರ ಹೆಚ್ಚಿನ ಬಡಾವಣೆಗಳಲ್ಲಿ ಪಾದಚಾರಿಗಳು ಓಡಾಡುವ ರಸ್ತೆಯ ಮೇಲಿರುವ ತೆಂಗಿನ ಮರ ಮತ್ತು ಹೂದೋಟವನ್ನು ತೆರವುಗೊಳಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಬೆಂಗಳೂರು, ಮೈಸೂರು ವಿಭಾಗದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮತ್ತು ಖಾಸಗಿ ಶಾಲೆಗಳ ಒಕ್ಕೂಟ (ಮೈಸೂರು ವಲಯ) ದ ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಮೈಸೂರು ನಗರ ಮೊದಲಿನಿಂದಲೂ ಉದ್ಯೋಗದಿಂದ ನಿವೃತ್ತಿ ಹೊಂದಿದವರ ವಾಸಕ್ಕೆ ಯೋಗ್ಯವಾದ ನಗರವೆಂದು ಕೇಳಿದ್ದೇವೆ. ಅದಲ್ಲದೆ ಮೈಸೂರು ನಗರವು ಉತ್ತಮ ಪ್ರವಾಸಿ ಕೇಂದ್ರಗಳನ್ನು ಹೊಂದಿದ್ದು ಪ್ರಪಂಚದ ಪ್ರವಾಸಿತಾಣಗಳಲ್ಲಿ ಮೊದಲನೇ ಸ್ಥಾನ ಪಡೆದಿದೆ.  ಪ್ರವಾಸೋದ್ಯಮದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಈ  ಕಾರಣದಿಂದ ವಿಶ್ವ ಪ್ರವಾಸಿಗರನ್ನು ತನ್ನತ್ತ ಸೆಳೆಯುವತ್ತ ಸಾಗಿದೆ. ಹಾಗೂ ನಮ್ಮ ನಗರದ ಸುತ್ತಮುತ್ತ ಬಹುದೊಡ್ಡ ಕೈಗಾರಿಕೆಗಳು ಹಾಗೂ ತಂತ್ರಜ್ಞಾನ (ಸಾಫ್ಟ್ ವೇರ್) ಕಂಪನಿಗಳು, ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ 13 ಉನ್ನತ ಮಟ್ಟದ ಕಾಲೇಜುಗಳು, 3 ಮೆಡಿಕಲ್ ಕಾಲೇಜುಗಳು ಮತ್ತು 9 ಇಂಜಿನಿಯರಿಂಗ್ ಕಾಲೇಜುಗಳು  ಇರುವುದರಿಂದ ಉದ್ಯೋಗಾಕಾಂಕ್ಷಿಗಳನ್ನು ಸೆಳೆಯುವತ್ತ  ಮೈಸೂರು ನಗರವು ತನ್ನದೇ ಆದ ಪ್ರಭಾವ ಬೀರಿದೆ.

ಆದರೆ ನಗರದ ಹೆಚ್ಚಿನ ಬಡಾವಣೆಗಳಲ್ಲಿ ಮೊದಲಿನಿಂದಲೂ ಪಾದಚಾರಿಗಳು ಓಡಾಡುವ ರಸ್ತೆಯಲ್ಲಿ ತೆಂಗಿನ ಮರಗಳು ಹಾಗೂ ಹೂದೋಟವನ್ನು ನಿರ್ಮಾಣ ಮಾಡಿಕೊಂಡು ಇದರಿಂದ ಬರುವ ಆದಾಯವನ್ನು ಮನೆಯವರು ಬಳಸಿಕೊಳ್ಳುತ್ತಿದ್ದಾರೆ. ಈ ಮರಗಳು, ಹೂದೋಟಗಳು ಇರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಪಾದಚಾರಿಗಳು ಓಡಾಡುವ  ರಸ್ತೆಯು ಮೈಸೂರಿನ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಯಾಗಿರುತ್ತದೆ. ಇದರ ಅರಿವಿಲ್ಲದ ಮನೆಯ ಮಾಲೀಕರು ಓಡಾಡುವ ಪಾದಚಾರಿಗಳನ್ನು ಹೆದರಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇದನ್ನು  ಜಿಲ್ಲಾಧಿಕಾರಿಗಳು ಕೂಡಲೇ ಗಮನಿಸಿ ತೆಂಗಿನ ಮರಗಳು ಹಾಗೂ ಹೂದೋಟವನ್ನು ತೆರವು ಮಾಡಿಸಿ ಪಾದಾಚಾರಿಗಳು ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಡಬೇಕೆಂದು   ಮನವಿ ಮಾಡಿಕೊಂಡಿದ್ದಾರೆ.

ಈ ಪಾದಚಾರಿಗಳು ಓಡಾಡುವ ರಸ್ತೆಯು ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಸ್ತಿಯಾಗಿರುವುದರಿಂದ  ಅಲ್ಲಿರುವ ತೆಂಗಿನ ಮರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರಿಂದ ಬರುವ ಆದಾಯವನ್ನು ನಗರದ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸುತ್ತೋಲೆಯನ್ನು ಹೊರಡಿಸಬೇಕೆಂದು   ಮನವಿ ಮಾಡಿಕೊಂಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: