ಕರ್ನಾಟಕಪ್ರಮುಖ ಸುದ್ದಿ

ಅಕ್ಕನಿಗೆ ತೊಂದರೆ ಕೊಡುತ್ತಿದ್ದ ಬಾವನ ಕೊಲೆಗೈದ ಬಾಮೈದಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು

ರಾಜ್ಯ(ಚಾಮರಾಜನಗರ)ಏ.3:- ಅಕ್ಕನಿಗೆ ಪ್ರತಿನಿತ್ಯ ಹೊಡೆದು ತೊಂದರೆ ಕೊಡುತ್ತಿದ್ದ ಕಾರಣಕ್ಕೆ ಬಾವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ ಬಾಮೈದನಿಗೆ ಕೊಳ್ಳೇಗಾಲ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಹನೂರು ತಾಲೂಕಿನ ಆಲಂಬಾಡಿ ಗ್ರಾಮದ ಸೆಲ್ವ ಎಂಬಾತನೇ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿಗೆ ಸೇರಿದ ಆಲಂಬಾಡಿ ಗ್ರಾಮದ ಮೇರಿ ವಿಧವೆಯಾಗಿದ್ದರು. ಕುಟುಂಬದವರ ಒಪ್ಪಿಗೆ ಪಡೆದು ಗ್ರಾಮದ ಸುರೇಶ್ ಎಂಬವರ ಜೊತೆ 2ನೇ ಮದುವೆಯಾಗಿದ್ದರು. ಸುರೇಶ್ ನಿತ್ಯವೂ ಮೇರಿ ಅವರೊಂದಿಗೆ ಪ್ರತಿನಿತ್ಯ ಜಗಳ ಮಾಡಿ ಕಿರುಕುಳ ನೀಡುತ್ತಿದ್ದ. ಈ ವಿಚಾರ ಮೇರಿಯ ತಮ್ಮ ಸೆಲ್ವಗೆ ತಿಳಿದಿತ್ತು. 2017 ನವೆಂಬರ್ 25 ರಂದು ಮೇರಿ ಮತ್ತು ಸುರೇಶ್ ಜಗಳವಾಡುತ್ತಿದ್ದುದನ್ನು ಗಮನಿಸಿದ ಸೆಲ್ವ, ಸುರೇಶ್‌ಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ಇದ್ದರೆ ತಾನೆ ನಮ್ಮ ಅಕ್ಕನಿಗೆ ಪ್ರತಿನಿತ್ಯ ಹೊಡೆದು ಚಿತ್ರಹಿಂಸೆ ನೀಡುತ್ತಿಯಾ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ದೊಣ್ಣೆಯಿಂದ ತಲೆಗೆ, ಕೈ, ಕಾಲು ಸೇರಿದ ಭಾಗಕ್ಕೆ ಹೊಡೆದಿದ್ದ. ತಡೆಯಲು ಬಂದ ಅಕ್ಕ ಮೇರಿಗೂ ಹೊಡೆದು ಪರಾರಿಯಾಗಿದ್ದ.

ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡಿಸಿ ಹೆಚ್ಚಿನ ಚಿಕಿತ್ಸೆಗೆ ಸೇಲಂ ಮೋಹನ ಕುಮಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನವೆಂಬರ್‌ 29ರಂದು ಸುರೇಶ್ ಮೃತಪಟ್ಟಿದ್ದ.
ಮಹದೇಶ್ವರ ಬೆಟ್ಟದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಸೆಲ್ವ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಕೊಲೆ ಕೃತ್ಯ ಸಾಬೀತಾಗಿದ್ದರಿಂದ ಸೆಲ್ವಗೆ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 20 ಸಾವಿರ ದಂಡ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: