
ಮೈಸೂರು
ಕೋವಿಡ್-19 ಹೆಚ್ಚಾಗುತ್ತಿರುವ ವಾರ್ಡ್ಗಳಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಬೇಕು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಮೈಸೂರು,ಏ. 3 :- ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು ಈಗ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ನಡೆದ ಸಭೆಯಲ್ಲಿ ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಹಾಗಾಗಿ ಕಳೆದ ವರ್ಷ ಕೋವಿಡ್ ಪರಿಸ್ಥಿತಿ ಉತ್ತುಂಗದಲ್ಲಿದ್ದಾಗ ಏನೆಲ್ಲಾ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದರೋ ಅದೇ ಕ್ರಮಗಳನ್ನು ಈಗ ಚಾಚೂ ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದರು.
ಸೋಂಕಿತರನ್ನು ಕ್ವಾರಂಟೈನ್ ಮಾಡುವುದರ ಜೊತೆಗೆ ಅವರ ಸಂಪರ್ಕಿತರನ್ನೂ ಪತ್ತೆ ಮಾಡಿ, ಅವರಿಂದ ಸೋಂಕು ಹರಡದಂತೆ ಎಚ್ಚರವಹಿಸಬೇಕು. ಈಗ ಮೈಸೂರಿನಲ್ಲಿ ಕೊರೋನಾ ಪರೀಕ್ಷಾ ಪ್ರಮಾಣವನ್ನು ದ್ವಿಗುಣ ಮಾಡಿರುವುದರ ಜೊತೆಗೆ ಮುಂದಿನ ಹದಿನೈದು ದಿನಗಳಲ್ಲಿ ಮೈಸೂರಿನಲ್ಲಿ 3 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡುವ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದರು.
ಕೊರೋನಾ ಲಸಿಕೆ ನೀಡಲು ಈಗಾಗಲೇ 24 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯುವಂತೆ ಜಾಗೃತಗೊಳಿಸಬೇಕು. ಕೊರೋನಾ ಪರೀಕ್ಷೆ ಹಾಗೂ ಲಸಿಕೆ ನೀಡುವ ಕಾರ್ಯ ಎರಡೂ ತ್ವರಿತಗತಿಯಲ್ಲಿ ನಡೆದರೆ ಮಾತ್ರ ಕೋವಿಡ್ ಪರಿಸ್ಥಿತಿಯನ್ನು ನಿರೀಕ್ಷಿತ ರೀತಿಯಲ್ಲಿ ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.
ಮೈಸೂರು ನಗರದಲ್ಲಿ 54 ಸಬ್ ಸೆಂಟರ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ವಾರದ ಏಳು ದಿನಗಳಲ್ಲೂ ಕೊರೋನ ಲಸಿಕೆಯನ್ನು ಉಚಿತವಾಗಿ ವಿತರಿಸುವಂತೆ ಅವರು ವಲಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಶಿಲ್ಪನಾಗ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಡಿಹೆಚ್ ಓ ಡಾ.ಟಿ.ಅಮರನಾಥ್, ನಗರಾಭಿವೃಧಿ ಕೋಶದ ಯೋಜನಾ ನಿರ್ದೇಶಕ ಅಷಾದ್ ಶರೀಫ್, ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಪಿ.ರವಿ, ಲಸಿಕೆ ನೋಡಲ್ ಅಧಿಕಾರಿ ಡಾ.ಎಲ್.ರವಿ, ಪಾಲಿಕೆ ವ್ಯಾಪ್ತಿಯ ವಲಯ ಆಯುಕ್ತರು, ಪರಿಸರ ಎಂಜಿನಿಯರ್ ಗಳು ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.