ದೇಶಪ್ರಮುಖ ಸುದ್ದಿ

ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿಎಸ್ವೈಗೆ ಬಿಗ್ ರಿಲೀಫ್; ವಿಚಾರಣೆಗೆ ಸುಪ್ರೀಂ ತಡೆ

ನವದೆಹಲಿ/ಬೆಂಗಳೂರು,ಏ.5-ಅಕ್ರಮ ಭೂ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ನ್ಯಾಯಾಲಯದಲ್ಲಿನ ಪ್ರಕರಣದ ವಿಚಾರಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠವು ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದಾರೆ.

ಐಟಿ ಪ್ರಾಜೆಕ್ಟ್‌ಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ಧ ವಿಚಾರಣೆ ನಡೆಸುವುದಕ್ಕೆ ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಆದರೆ ಮಾರ್ಚ್ 21ರಂದು ಅದರ ವಿರುದ್ಧ ಆದೇಶ ನೀಡಿದ್ದ ಹೈಕೋರ್ಟ್, ಯಡಿಯೂರಪ್ಪ ಅವರ ವಿಚಾರಣೆಗೆ ಸೂಚನೆ ನೀಡಿತ್ತು.

ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.

ಯಡಿಯೂರಪ್ಪ ಪರ ಹಾಜರಿದ್ದ ಹಿರಿಯ ವಕೀಲ ಕೆ.ವಿ.ವಿಶ್ವನಾಥನ್, ವಿಚಾರಣಾ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ಆರಂಭಿಸಲಿದೆ. ಹೀಗಾಗಿ ಇದರ ವಿರುದ್ಧ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು. ‘ನಾವು ತಡೆ ನೀಡುತ್ತೇವೆ ಎಂದು ತಿಳಿಸಿದ್ದೇವೆ. ನಿಮ್ಮ ಪರ ಆದೇಶ ನೀಡಿದ್ದರೂ ಅದನ್ನು ಕೇಳಿಸಿಕೊಳ್ಳಲಾರದಷ್ಟು ಉದ್ವೇಗಕ್ಕೆ ಒಳಗಾಗಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಹೇಳಿದರು.

ಹೂವಿನಾಯಕನಹಳ್ಳಿಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂ ಸ್ವಾಧೀನ ಮಾಡಿಕೊಂಡಿತ್ತು. ಅದರಲ್ಲಿ 20 ಎಕರೆ ಭೂಮಿಯನ್ನು ಮುಖ್ಯಮಂತ್ರಿ ನಿಯಮ ಉಲ್ಲಂಘಿಸಿ ಡಿನೋಟಿಫಿಕೇಷನ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಕ್ರಮ ಡಿ ನೋಟಿಫೈಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೈಗಾರಿಕಾ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಮತ್ತಿತರ ವಿರುದ್ಧ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಹಾಗೂ ಕಟ್ಡಾ ಸುಬ್ರಮಣ್ಯ ನಾಯ್ಡು ಅವರನ್ನು ಪ್ರಕರಣದಿಂದ ಕೈ ಬಿಟ್ಟಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾ. ಮೈಕಲ್ ಡಿ. ಕುನ್ಹಾ ಅವರಿದ್ದ ನ್ಯಾಯಪೀಠ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಕಳೆದ ತಿಂಗಳು ರದ್ದು ಮಾಡಿತ್ತು. ಈ ಮೂಲಕ ಸಿಎಂ ಮೇಲಿನ ಪ್ರಕರಣದ ವಿಚಾರಣೆಗೆ ಮತ್ತೆ ಚಾಲನೆ ದೊರಕಿತ್ತು. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: