ದೇಶಪ್ರಮುಖ ಸುದ್ದಿ

ಅನಿಲ್ ದೇಶ್ ಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿಸಲಿರುವ ಮಹಾ ಸರ್ಕಾರ

ಮುಂಬೈ,ಏ.6-ಎನ್ ಸಿಪಿ ಮುಖಂಡ ಅನಿಲ್ ದೇಶ್ ಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಗೃಹ ಸಚಿವ ದಿಲಿಪ್ ವಾಲ್ಸೆ ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಬಾಂಬೆ ಹೈಕೋರ್ಟ್ ತೀರ್ಪುನ್ನು ಸುಪ್ರೀಂನಲ್ಲಿ ಸರ್ಕಾರ ಪ್ರಶ್ನಿಸಲಿದೆ ಎಂದು ತಿಳಿಸಿದರು.

ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೋಮವಾರ ನಿರ್ದೇಶಿಸಿತ್ತು. ಇದಾದ ನಂತರ ದೇಶ್ ಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಪ್ರಮುಖ ಇಲಾಖೆಯಾದ ಗೃಹ ಖಾತೆ ಜವಾಬ್ದಾರಿಯನ್ನು ಎನ್ ಸಿಪಿ ಮುಖಂಡ ದಿಲೀಪ್ ವಾಲ್ಸಾ ಪಾಟೀಲ್ ಅವರಿಗೆ ನೀಡಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: