ಮೈಸೂರು

ಜಿಲ್ಲಾ ಕಸಾಪ ಚುನಾವಣೆ: ಸಾಹಿತಿ ಬನ್ನೂರು ಕೆ.ರಾಜುರಿಂದ ನಾಮಪತ್ರ ಸಲ್ಲಿಕೆ

ಮೈಸೂರು,ಏ.7-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸಾಹಿತಿ ಬನ್ನೂರು ಕೆ.ರಾಜು ಅವರು ಇಂದು ನಾಮಪತ್ರ ಸಲ್ಲಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಬನ್ನೂರು ರಾಜು ಅವರು ಚುನಾವಣಾಧಿಕಾರಿ ರತ್ನಾಂಬಿಕಾ ಅವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ‌ ಮಾತಾಡಿದ ಅವರು, ಕಸಾಪ ಚುನಾವಣೆ ನಿಯಮಬಾಹಿರವಾಗಿ ನಡೆಯುತ್ತಿದೆ‌. 106 ವರ್ಷಗಳ ಕಸಾಪ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಡಳಿತಾಧಿಕಾರಿಯಿಲ್ಲದೆ‌ ಚುನಾವಣೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿಗಳನ್ನು ಈಗಲೂ ನಾನು‌ ಆಡಳಿತಾಧಿಕಾರಿ ನೇಮಿಸಿ ಬಳಿಕ ಚುನಾವಣೆ‌ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು.

ಅರ್ಹರನ್ನು ಗೆಲ್ಲಿಸಿ: ನಾನು ಚುನಾವಣಾ ಕಣದಲ್ಲಿರುವ ಏಕೈಕ ಸಾಹಿತಿ. ಪರಿಷತ್ ಮತದಾರರು ಅರ್ಹರಿಗೆ ಮತಹಾಕಿ‌ ಗೆಲ್ಲಿಸಬೇಕು. ನನಗೇ ಮತ ನೀಡಿ ಎಂದು ಕೇಳುವುದಿಲ್ಲ. ಯಾರು ಅರ್ಹರಿದ್ದಾರೋ ಅವರನ್ನು ಗೆಲ್ಲಿಸಿ. ಚುನಾಣೆಯನ್ನು ನಿಯಮ ಬದ್ಧವಾಗಿ ನಡೆಸಿದರೆ ಎದುರಾಳಿಗಳು ಠೇವಣಿ ಕಳೆದುಕೊಳ್ಳುತ್ತಾರೆ. ಯಾವ ರೀತಿ ಚುನಾವಣೆ ನಡೆಸುತ್ತಾರೆ‌ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಪ್ರಜ್ಞಾವಂತ ಮತದಾರರು ಅರ್ಹರನ್ನು ಆಯ್ಕೆ ಮಾಡಬೇಕು. ಕಳೆದ ಹತ್ತಾರು ವರ್ಷಗಳಿಂದ ಸಾಹಿತಿಯಾಗಿ, ಲೇಖಕನಾಗಿ, ಅಂಕಣಕಾರನಾಗಿ ಕನ್ನಡದ ಸೇವೆ ಮಾಡುತ್ತಿರುವ ನನಗೆ ಮತ್ತಷ್ಟು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ಕಸಾಪವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ನನಗೆ ಮತನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಇತಿಹಾಸ ತಜ್ಞ ಪಿ.ವಿ.ನಂಜರಾಜ ಅರಸ್, ಸಾಹಿತಿ ಡಿ.ಎನ್.ಕೃಷ್ಣಮೂರ್ತಿ, ಕನ್ನಡ ಕ್ರಿಯಾಸಮಿತಿ ಸಂಚಾಲಕರಾದ ಕೊ.ಸು.ನರಸಿಂಹಮೂರ್ತಿ, ಕನ್ನಡ ಹೋರಾಟಗಾರ ಆರ್.ಎ.ರಾಧಾಕೃಷ್ಣ, ಗ್ರಾಮಾಂತರ ಬುದ್ಧಿ ಜೀವಿ ಬಳಗದ ಅಧ್ಯಕ್ಷ ಭೇರ್ಯ ರಾಮಕುಮಾರ್, ಕಾವೇರಿ ಬಳಗದ ಎನ್.ಕೆ.ಕಾವೇರಿಯಮ್ಮ, ಹಿರಣ್ಮಯಿ ಪ್ರತಿಷ್ಠಾನದ ಎ.ಸಂಗಪ್ಪ, ವೀರಗಾಸೆ ಕಲಾವಿದ ಅಂಬಳೆ ಶಿವಣ್ಣ, ವಕೀಲ ಆರ್.ಡಿ.ಕುಮಾರ್, ಪತ್ರಕರ್ತರಾದ ಹೊಮ್ಮ ಮಂಜುನಾಥ್, ಕೆ.ಮಹೇಶ್, ಶ್ರೀನಿವಾಸ್, ಗಾಯಕ ರೇವಣ್ಣ, ಲೇಖಕ ಅಶೋಕಪುರಂ ಸಿದ್ಧಸ್ವಾಮಿ, ದೇಶಹಳ್ಳಿ ರಾಮಚಂದ್ರಚಾರ್, ಹುಲ್ಲಹಳ್ಳಿ ಸಿದ್ಧರಾಜು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: