ಕರ್ನಾಟಕಪ್ರಮುಖ ಸುದ್ದಿ

ಉದ್ಯೋಗಸ್ಥರಿರುವಲ್ಲಿಗೇ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ ಅವಕಾಶ : ಸಚಿವ ಡಾ.ಕೆ.ಸುಧಾಕರ್ ಮಾಹಿತಿ

ರಾಜ್ಯ( ಬೆಂಗಳೂರು)ಏ.8:- ಕೋವಿಡ್ ಸೋಂಕು ತಡೆಗಟ್ಟಲು ಹಾಗೂ ಹೆಚ್ಚಿನವರಿಗೆ ಲಸಿಕೆ ನೀಡಲು ಉದ್ಯೋಗಸ್ಥರಿರುವಲ್ಲಿಗೇ ಹೋಗಿ ಲಸಿಕೆ ನೀಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು, ಇದಕ್ಕೆ ರಾಜ್ಯದಲ್ಲೂ ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣ ಸಂಬಂಧ ಬೀದರ್, ಬೆಳಗಾವಿ, ವಿಜಯಪುರ, ಕಲಬುರ್ಗಿ, ತುಮಕೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಜಿಲ್ಲಾಡಳಿತಗಳೊಂದಿಗೆ ಸಚಿವರು ವೀಡಿಯೋ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಉದ್ಯೋಗಸ್ಥರಿಗೆ, ಅರ್ಹರಿಗೆ ಅದೇ ಸ್ಥಳಗಳಲ್ಲಿ ಹೋಗಿ ಲಸಿಕೆ ನೀಡುವ ಅವಕಾಶ ಕೊಟ್ಟಿದೆ. ಈ ಕುರಿತು ದೊಡ್ಡ ಉದ್ಯಮಗಳು, ಐಟಿ ಉದ್ಯಮಗಳು ಮನವಿ ಮಾಡಿದ್ದವು. ಅದಕ್ಕೆ ಕೇಂದ್ರದಿಂದ ಮಂಜೂರಾತಿ ಸಿಕ್ಕಿದೆ. ಏಪ್ರಿಲ್ 11 ರಿಂದ ಅವರಿರುವ ಸ್ಥಳದಲ್ಲೇ ಲಸಿಕೆ ನೀಡುವ ವ್ಯವಸ್ಥೆಯಾಗಲಿದೆ. ಇದರಿಂದಾಗಿ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಲಿದೆ. ಈವರೆಗೆ 50 ಲಕ್ಷ ಡೋಸ್ ತಲುಪಲಾಗಿದೆ. ಆದಷ್ಟು ಶೀಘ್ರ ಇನ್ನಷ್ಟು 50 ಲಕ್ಷವಾಗಿ, ಒಂದು ಕೋಟಿ ತಲುಪಲಿದೆ ಎಂದಿದ್ದಾರೆ.
ಜನರು ನಡವಳಿಕೆಗಳಲ್ಲಿ ಬದಲಾವಣೆ ಮಾಡಿಕೊಂಡು ಸರ್ಕಾರಕ್ಕೆ ಸಹಕಾರ ನೀಡಬೇಕು. ಎರಡನೇ ಅಲೆ ನಿರೀಕ್ಷೆಗೆ ಮೀರಿ ಹರಡುತ್ತಿದೆ. ಸೋಂಕು ಹೆಚ್ಚಾದರೆ ಹಾಸಿಗೆ ಲಭ್ಯತೆ ಕಷ್ಟವಾಗುತ್ತದೆ. ಕಳೆದೊಂದು ವರ್ಷದಿಂದ ಎಲ್ಲ ಸಿದ್ಧತೆ ಮಾಡಿಕೊಂಡಿರುವುದರಿಂದ ಅಂತಹ ಸಮಸ್ಯೆ ಇಲ್ಲ. ಆದರೆ ಇದೇ ರೀತಿ 6%, 9% ಪಾಸಿಟಿವಿಟಿ ದರ ಬಂದರೆ ಅಥವಾ 20%, 25% ಬಂದರೆ ಎಷ್ಟು ಜನ ಐಸಿಯುಗೆ ಹೋಗಬೇಕಾಗುತ್ತದೆ ಎಂದು ಯೋಚಿಸಬೇಕಾಗುತ್ತದೆ. ಎಲ್ಲ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ 5 ಸಾವಿರ ಹತ್ತಿರಕ್ಕೆ ಪ್ರಕರಣ ಸಂಖ್ಯೆ ಬಂದಿದೆ. ಪಾಸಿಟಿವಿಟಿ ದರ ಶೇ.5.56 ಇದೆ. ಇಡೀ ರಾಜ್ಯದಲ್ಲಿ 35 ಒಟ್ಟು ಸಾವಾಗಿದ್ದರೆ, 25 ಬೆಂಗಳೂರಿನಲ್ಲೇ ಆಗಿದೆ. ನಾಳೆ ಬಿಬಿಎಂಪಿ, ಬೆಂಗಳೂರು ನಗರ, ಗ್ರಾಮಾಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪ್ರಧಾನಮಂತ್ರಿಗಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಲಿರುವ ಸಭೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡ ಪಾಲ್ಗೊಂಡು ಚರ್ಚಿಸಲಿದ್ದಾರೆ ಎಂದಿದ್ದಾರೆ.

Leave a Reply

comments

Related Articles

error: