ಮೈಸೂರು

ರಸ್ತೆಯಲ್ಲಿ ಬಿದ್ದ ಚಿನ್ನದ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸಾದಿಕ್

ಕಾಲ ಕೆಟ್ಟೋಗಿದೆ. ಸಮಾಜ ಕೆಟ್ಟ ಜನರಿಂದಲೇ ತುಂಬಿಹೋಗಿದೆ ಅಂದುಕೊಳ್ಳುತ್ತಿರುತ್ತೇವೆ. ಆದರೆ ಅವರ ಮಧ್ಯದಲ್ಲೆಲ್ಲೋ ಅಪರೂಪದ ವ್ಯಕ್ತಿಗಳು ಪ್ರಾಮಾಣಿಕ, ನಿಷ್ಠೆಯಿಂದಿರುವ ವ್ಯಕ್ತಿಗಳು ಕಾಣಸಿಗುತ್ತಾರೆ. ಅಂಥಹವರಲ್ಲೊಬ್ಬರು ಸಾದಿಕ್. ರಸ್ತೆಯಲ್ಲಿ ಬಿದ್ದಿರುವ 90ಗ್ರಾಂ ಚಿನ್ನದ ಸರವನ್ನು ಕಳೆದುಕೊಂಡವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಟಿ.ಕೆ.ಲೇೊಔಟ್ ನಿವಾಸಿ ಸಿವಿಲ್ ಕಂಟ್ರಾಕ್ಟರ್ ಸಾದಿಕ್ ಗುರುವಾರ ರಾತ್ರಿ 10ಗಂಟೆಯವರೆಗೂ ವಾಕಿಂಗ್ ಮಾಡುತ್ತಿದ್ದರು. ಅಲ್ಲೆ ಪಕ್ಕದಲ್ಲಿರುವ ಗುರುರಾಘವೇಂದ್ರ ಸಭಾಭವನದಲ್ಲಿ ರಾಮಾನುಜ ರಸ್ತೆಯಲ್ಲಿರುವ ಕುಟುಂಬದ ಅನಿತಾ ಎಂಬವರ  ವಿವಾಹ ಶರತ್ ಎಂಬವರ ಜೊತೆ  ಶುಕ್ರವಾರ ನಿಶ್ಚಯವಾಗಿತ್ತು. ಅದರಿಂದ ಅನಿತಾ ಮನೆಯವರು ಮನೆಯಿಂದ ಸಭಾಭವನಕ್ಕೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳನ್ನು ತಮ್ಮ ಕಾರಿನಲ್ಲಿ ತಂದಿಳಿಸುತ್ತಿದ್ದರು.  ಹೀಗೆ ಹಲವು ಸಲ ಆಚೆ ಈಚೆ ಓಡಾಡಿದಾಗ ಅವರ ಕಾರಿನಲ್ಲಿದ್ದ 90ಗ್ರಾಂ ಚಿನ್ನದ ಸರ, ಮೂರುವರೆ ಸಾವಿರ ನಗದು ಇರುವ ಪರ್ಸ್ ಬಿದ್ದಿತ್ತು. ಆ ಪರ್ಸ್ ವಾಕಿಂಗ್ ಮಾಡುತ್ತಿದ್ದ ಸಾದಿಕ್ ಅವರಿಗೆ ದೊರಕಿತು. ಅವರು ಅದನ್ನು ಕೊಂಡೊಯ್ದು ಸರಸ್ವತಿಪುರಂ ಪೊಲೀಸ್ ಠಾಣೆಗೆ ನೀಡಿದ್ದಾರೆ. ಪರ್ಸ್ ನಲ್ಲಿ ಅವರು ಬಂಗಾರದ ಆಭರಣ ಕೊಂಡ ಮಳಿಗೆಯ ರಸೀದಿಯಿತ್ತು. ಬಂಗಾರದ ಆಭರಣದ ಮಳಿಗೆಗೆ ದೂರವಾಣಿ ಕರೆ ಮಾಡಿ ಆಭರಣವನ್ನು ಯಾರು ಖರೀದಿಸಿದ್ದರೆಂಬ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ವಿವಾಹ ಸ್ಥಳಕ್ಕೆ ತೆರಳಿ ನೀಡಿದ್ದಾರೆ.

ವಧು ಅನಿತಾ ಮನೆಯವರು ಯಾರು ತಲುಪಿಸಿದ್ದಾರೆಂಬ ಮಾಹಿತಿಯನ್ನು ಪಡೆದು ಸಾಧಿಕ್ ಅವರನ್ನು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಇನ್ಸಪೆಕ್ಟರ್ ಪೂವಯ್ಯ ಸಾಧಿಕ್ ಅವರನ್ನು ಸನ್ಮಾನಿಸಿದ್ದಾರೆ. ನಂತರ ಮಾತನಾಡಿದ ಅವರು ಸಮಾಜದಲ್ಲಿರುವವರೆಲ್ಲರೂ ನಿಮ್ಮ ಹಾಗೆಯೇ ರೂಪುಗೊಂಡರೆ ಅಪರಾಧಗಳಾಗುವುದೇ ಇಲ್ಲ. ಯಾರನ್ನೂ ಶಂಕೆಯಿಂದ ನೋಡುವ ಪರಿಸ್ಥಿತಿ ಬರುವುದಿಲ್ಲ ಎಂದರು. ಒಟ್ಟಿನಲ್ಲಿ ಸಾದಿಕ್ ಪ್ರಾಮಾಣಿಕತೆಯನ್ನು ಮೈಸೂರಿನ ಜನತೆ ಶ್ಲಾಘಿಸುವಂತಾಗಿದೆ. (ಕೆ.ಎಸ್-ಎಸ್.ಎಚ್)

 

 

Leave a Reply

comments

Related Articles

error: