
ಕರ್ನಾಟಕಪ್ರಮುಖ ಸುದ್ದಿ
ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು,ಏ.8-ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪದಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರ ಸಹಕಾರ ಅತ್ಯಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಂಗಳೂರು ಮಹಾನಗರ ಪಾಲಿಕೆ, ನಗರ, ಗ್ರಾಮಾಂತರ ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ. ಒಟ್ಟು ಎಂಟು ವಲಯದವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸೋಂಕಿತರು ಹೆಚ್ಚು ಆಗುತ್ತಿರುವುದರಿಂದ ಅವರಿಗೆ ಚಿಕಿತ್ಸೆ ಹೆಚ್ಚಿಸುವುದು ಹೇಗೆ? ಜನರನ್ನು ಐಸೋಲೇಶನ್ ನಲ್ಲಿ ಇಡುವುದು, ತಂತ್ರಜ್ಞಾನವನ್ನು ಬಳಸಿಕೊಂಡು ಅವರನ್ನು ನಿಗಾದಲ್ಲಿ ಇಡುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ ಎಂದು ತಿಳಿಸಿದರು.
ಕಳೆದ ಬಾರಿ ಬೂತ್ ಮಟ್ಟದಲ್ಲಿ ಒಂದು ಕಾರ್ಯಪಡೆ ರಚನೆ ಮಾಡಿದ್ದೆವು. ಬೆಂಗಳೂರಿನಲ್ಲಿ 8500 ಬೂತ್ಗಳಿಗೆ ಈ ಸಿಬ್ಬಂದಿಗಳು ಪ್ರತಿ ಮನೆಗೆ ಹೋಗಿ ವ್ಯಾಕ್ಸಿನ್ ಯಾರು ತಗೊಂಡಿಲ್ಲ? ಜೊತೆಗೆ ಯಾರು ಕೋವಿಡ್ ಪಾಸಿಟಿವ್ ಇದ್ದವರಿಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿವೆ ಎಂದರು.
ಕಳೆದ ಬಾರಿ ಇದು ಸಂಪೂರ್ಣ ಯಶಸ್ವಿ ಆಗಿಲ್ಲ. ಈ ಬಾರಿ ಮಾಡುತ್ತೇವೆ ಎಂದು ಗೌರವ್ ಗುಪ್ತ ಹೇಳಿದ್ದಾರೆ. 250 ಆಂಬುಲೆನ್ಸ್ ಗಳನ್ನು ಸಿದ್ಧ ಮಾಡಿದ್ದಾರೆ. ಹೆಚ್ಚು ಜನ ಸೇರುವ ಪಬ್, ಮಾರ್ಕೆಟ್, ರೈಲ್ವೆ ನಿಲ್ದಾಣ ಹೀಗೆ ಜನ ಸೇರುವ ಜಾಗದಲ್ಲಿ ತಪಾಸಣೆ ಮಾಡುತ್ತೇವೆ.
40 ಸಾವಿರ ಟೆಸ್ಟ್ ಪ್ರತಿದಿನ ಮಾಡುವಂತೆ ಬಿಬಿಎಂಪಿ ಗೆ ಹೇಳಿದ್ದೆವು, ಇದೀಗ ದಿನಕ್ಕೆ ಒಂದು ಲಕ್ಷ ಟೆಸ್ಟ್ ಮಾಡುವುದಕ್ಕೆ ಹೇಳಲಾಗಿದೆ. ಬಿಬಿಎಂಪಿ ಅಧಿಕಾರಿಗಳು ನಿಮ್ಮ ಮನೆಗೆ ಚೆಕ್ ಮಾಡಲು ಬಂದಾಗ ಅವರಿಗೆ ಸಹಕಾರ ನೀಡಿ, ಸ್ಥಳೀಯ ಫಾರ್ಮಸಿ, ಕ್ಲಿನಿಕ್ ಗೆ ಸಾರಿ ರಿಪೋರ್ಟ್ ಬಂದಾಗ ತಕ್ಷಣ ತಿಳಿಸುವಂತೆ ಹೇಳಲಾಗಿದೆ. ಖಾಸಗಿ ಆಸ್ಪತ್ರೆಗಳ ಜೊತೆಗೆ ಮಾತಾಡಿದ್ದೇವೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಜೊತೆಗೆ ಮಧ್ಯಾಹ್ನ ಸಭೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ 2000 ಮಾರ್ಷಲ್, ಹೋಮ್ ಗಾರ್ಡ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಕೊಡಬೇಕು ಎಂದು ಗೃಹ ಸಚಿವರ ಜೊತೆಗೆ ಮಾತಾಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಜನ ಸೇರುವ ಕಡೆ ಫೈನ್ ಹಾಕಿ, ಮಾಸ್ಕ್ ಹಾಕುವಂತೆ, ಸಾಮಾಜಿಕ ಅಂತರ ಕಾಪಾಡುವಂತೆ ಮಾರ್ಗದರ್ಶನ ಮಾಡಲಾಗುತ್ತಿದೆ. ಒಟ್ಟಿಗೆ ಸೇರುವ ಚಲನವಲನಗಳನ್ನು ನಿಯಂತ್ರಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು. ಕೋವಿಡ್ ನ ಎರಡನೇ ಅಲೆಗಳನ್ನು ನಿಯಂತ್ರಣ ಮಾಡುವುದು ನಮ್ಮ ಕೆಲಸ ಆಗಿದೆ. (ಎಂ.ಎನ್)