ಮೈಸೂರು

ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ದೊರಕುತ್ತಿಲ್ಲ; ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸೆಸ್ಕ್ ಎಂಡಿ ಕಚೇರಿಗೆ ಬೀಗ ಹಾಕುತ್ತೇವೆ ; ಶಾಸಕ ಸಾ.ರಾ.ಮಹೇಶ್  ಎಚ್ಚರಿಕೆ

ಮೈಸೂರು,ಏ.9:- ರೈತರಿಗೆ   ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ದೊರಕುತ್ತಿಲ್ಲ. ಪಂಪ್‌ ಸೆಟ್‌ ಗಳನ್ನೇ ನಂಬಿ ಬದುಕುತ್ತಿರುವ ರೈತರು ಕಂಗಾಲಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸೆಸ್ಕಾಂ ಎಂಡಿ ಕಚೇರಿಗೆ ಬೀಗ ಹಾಕುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್  ಎಚ್ಚರಿಕೆ ನೀಡಿದರು.

ಅವರಿಂದು ತಮ್ಮ ಕಛೇರಿಯಲ್ಲಿ  ವಿದ್ಯುತ್ ಕೊರತೆ ಕುರಿತಾಗಿ   ಸುದ್ದಿಗೋಷ್ಠಿ ನಡೆಸಿ ಮಾತನಾಡಿ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದರು. ಕೆಲವು ಭಾಗಗಳಲ್ಲಿ ತ್ರಿಫೇಸ್ ವಿದ್ಯುತ್ ಇಲ್ಲದೇ ಸಮಸ್ಯೆಯಾಗಿದೆ. ಆಯಾ ಭಾಗಗಳಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಮನವಿ ಮಾಡಲಾಗಿದೆ. ಇದುವರೆಗೂ ಸಂಬಂಧಿಸಿದವರು ಗಮನಹರಿಸುತ್ತಿಲ್ಲ ಎಂದರು. ರೈತರ ಪಂಪ್‌ಸೆಟ್‌ ಗಳಿಗೆ 7 ಗಂಟೆ ತ್ರೀಫೇಸ್ ವಿದ್ಯುತ್ ಸರಬರಾಜು ಭರವಸೆ ನೀಡಲಾಗಿತ್ತು.  ಸರ್ಕಾರ ವಿಧಾನಸಭೆಯಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಿಲ್ಲ.  ತ್ರಿಫೇಸ್ ವಿದ್ಯುತ್ ಸರಬರಾಜು ಆಗುತ್ತಿಲ್ಲ.  ಏ.6ರಿಂದ ವಿದ್ಯುತ್ ಸರಬರಾಜಿಗೆ ಸಮಯ ನಿಗದಿ ಮಾಡಿದೆ.

ಹಗಲು 4.30 ಮತ್ತು ರಾತ್ರಿ 2.30 ಗಂಟೆ ಕರೆಂಟ್ ಕೊಡಬೇಕು.  ಆದರೆ ರೈತರಿಗೆ ತ್ರೀಫೇಸ್ ವಿದ್ಯುತ್ ಸಿಗುತ್ತಿಲ್ಲ.  7 ಗಂಟೆ ಕರೆಂಟ್ ಕೊಡುತ್ತೇವೆ ಅಂತಾರೆ.  ವಾಸ್ತವದಲ್ಲಿ 3 ಗಂಟೆ ವಿದ್ಯುತ್ ಕೂಡ ಸಿಗುತ್ತಿಲ್ಲ.  ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸೆಸ್ಕ್ ಎಂಡಿ ಕಚೇರಿಗೆ ಬೀಗ ಹಾಕುತ್ತೇವೆ. ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮೈಸೂರು ಉಸ್ತುವಾರಿ ಮಂತ್ರಿಗಳು ಒತ್ತಡದಲ್ಲಿದ್ದಾರೆ‌

ಮೈಸೂರು ಉಸ್ತುವಾರಿ ಮಂತ್ರಿಗಳು ಒತ್ತಡದಲ್ಲಿದ್ದಾರೆ‌. ಹಾಗಾಗಿ ಅವರು ಮೈಸೂರಿನ ಸಮಸ್ಯೆಗಳನ್ನು ಗಮನಿಸುತ್ತಿಲ್ಲ. ತಮ್ಮ ರಕ್ಷಣೆಗೆ ನ್ಯಾಯಾಲಯಕ್ಕೆ ಹೋದವರು ನೀವು. 6.5 ಕೋಟಿ ಜನರ ರಕ್ಷಣೆ ಹೇಗೆ ಮಾಡ್ತೀರಾ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌‌ ಅವರನ್ನು ಪ್ರಶ್ನಿಸಿದರು. ಶಾಸಕರು ಒಂದು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಆದರೆ ಸಚಿವರು ಎರಡು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಎರಡೆರಡು ಬಾರಿ ಪ್ರಮಾಣ ವಚನ ಸ್ವೀಕರಿಸಿದ ನೀವೇ ನಿಮ್ಮನ್ನ ರಕ್ಷಣೆ ಮಾಡಿಕೊಳ್ಳಲು ಆಗ್ತಿಲ್ಲ. ಇನ್ನು ಜನರ ರಕ್ಷಣೆ ಏನ್ ಮಾಡ್ತಿರಾ? ನಾನು ಬೇರೆ ಏನು ಮಾತನಾಡೋಲ್ಲ. ಆದ್ರೆ ನಿಮ್ಮ ಮನಸಾಕ್ಷಿಯನ್ನು ಕೇಳಿಕೊಳ್ಳಿ ಎಂದು ಕೋರ್ಟ್‌ ಗೆ ಹೋಗಿದ್ದ ಸಚಿವ ಎಸ್‌ ಟಿ ಸೋಮಶೇಕರ್ ಅವರಿಗೆಗೆ ಟಾಂಗ್ ನೀಡಿದರು.

ನೀವು ಇನ್ನೊಂದು ಪಕ್ಷ ಮೆಚ್ಚಿಸಲು ಮಾತನಾಡಬೇಡಿ : ಜಮೀರ್ ಗೆ ಟಾಂಗ್

ಹೆಚ್.ಡಿ.ಕುಮಾರಸ್ವಾಮಿ- ಜಮೀರ್ ಅಹಮದ್ ವಾಗ್ವಾದ ವಿಚಾರಕ್ಕೆ ಪ್ರತಿಕ್ರಿಯಿಸಿ ಜಮೀರ್ ಅವರು ಇವತ್ತು ದೊಡ್ಡ ಅರಮನೆಯಲ್ಲಿ ಇರಬಹುದು. ಆದರೆ ನಿಮಗೆ ವಾಸದ ಮನೆ ಕೊಟ್ಟವರು ಯಾರು ಅಂತ ನೆನಪಿಸಿಕೊಳ್ಳಿ. ನಿಮಗೆ ಸೀಟ್ ಕೊಟ್ಟಿದ್ದು ಯಾರು. ನಿಮ್ಮನ್ನು ವ್ಯಕ್ತಿಯಲ್ಲ ಶಕ್ತಿ ಎಂದಿದ್ದರು ಯಾರು. ನಿಮಗೆ ಚುನಾವಣೆಗೆ ಹಣ ಸಾಕಾಗದೆ ಇದ್ದಾಗ ತಂದುಕೊಟ್ಟಿದ್ದು ಯಾರು? ನೀವು ಇನ್ನೊಂದು ಪಕ್ಷ ಮೆಚ್ಚಿಸಲು ಮಾತನಾಡಬೇಡಿ ಎಂದು ಜಮೀರ್ ಅಹ್ಮದ್‌ಗೆ ಟಾಂಗ್ ನೀಡಿದರು.   ನಮ್ಮ ಪಕ್ಷವನ್ನು ಬೇರೆ ನಾಯಕರು ಯಾರೂ ಟೀಕೆ ಮಾಡಲ್ಲ‌. ಪಕ್ಷದಲ್ಲಿ ಅಧಿಕಾರ ಅನುಭವಿಸಿ, ನಮ್ಮ ನಾಯಕರನ್ನು ಇಂದ್ರ ಚಂದ್ರ ಅಂತ ಹೊಗಳಿರುತ್ತಾರೆ.  ಬಿಟ್ಟು ಹೋದ ಬಳಿಕ ನಮ್ಮ ನಾಯಕರ  ಬಗ್ಗೆ ಟೀಕೆ ಮಾಡ್ತಾರೆ.

ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರಿಗೆ ಟೀಕೆಗಳನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ನೀಡಿದ್ದಾರೆ ಎಂದು ಜಮೀರ್ ಅಹಮದ್‌ ವಿರುದ್ಧ   ವಾಗ್ದಾಳಿ ನಡೆಸಿದರು.

ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಲಿ : ಸಲಹೆ

ಸಾರಿಗೆ ನೌಕರರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾವುದೇ ಸರ್ಕಾರ ಎಲ್ಲ ಬೇಡಿಕೆಗಳನ್ನೂ ಏಕಾಏಕಿ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರ ಮುಷ್ಕರ ವಿಚಾರದಲ್ಲಿ ಸೂಕ್ತ ತೀರ್ಮಾನಕ್ಕೆ ಬರಬೇಕು. ಪ್ರೀತಿಯಿಂದ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಬೇಕು.  ಭಯದ ವಾತಾವರಣ ನಿರ್ಮಾಣ ಮಾಡಿ ಬಗೆಹರಿಸಲು ಸಾಧ್ಯವೇ ಇಲ್ಲ. ಏಕಾಏಕಿ ಬಸ್ ಬಂದ್ ಮಾಡಿ  ಸಾರ್ವಜನಿಕರಿಗೆ ಅನಾನುಕೂಲ ಮಾಡುವುದು ಸರಿಯಲ್ಲ. ನೌಕರರ ಪರವಾಗಿ ಮುಖಂಡರು ಪ್ರತಿಭಟನೆ ಮಾಡಲಿ.

ನೌಕರರು ಬಸ್ ಸಂಚಾರ ಆರಂಭಿಸಲಿ. ಆದರೆ ಎಲ್ಲರೂ ಪ್ರತಿಭಟನೆ ಮಾಡಿದರೆ ಸಮಸ್ಯೆ ಆಗಲಿದೆ. ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಲಿ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಅಧ್ಯಕ್ಷರಾದ ಚೆಲುವೇಗೌಡ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದ್ವಾರ್ಕೇಶ್, ಕೆ,ಆರ್ ಕ್ಷೇತ್ರ ಅಧ್ಯಕ್ಷರಾದ ಸಂತೋಷ್, ಮಾಜಿ ಮೇಯರ್ ರವಿ ಕುಮಾರ, ಮೈಸೂರು ನಗರ ಪಾಲಿಕೆ ಸದಸ್ಯರಾದ ಎಸ್ ಬಿ ಎಂ ಮಂಜು, ಜನತಾದಳದ ಅಧ್ಯಕ್ಷರು ಲೋಕೇಶ್ , ಉಪಾಧ್ಯಕ್ಷ ರಾಮು, ಕಾರ್ಯಾಧ್ಯಕ್ಷ, ಪ್ರಶಾಂತ್ ,ಪ್ರಕಾಶ್ ಪ್ರಿಯದರ್ಶಿನಿ, ಮಾಜಿ ನಗರ ಪಾಲಿಕೆ ಸದಸ್ಯರಾದ ಕೆವಿ ಮಲ್ಲೇಶ್, ಶೈಲೆಂದ್ರ,ಹಾಗೂ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: