ಮೈಸೂರು

ಪರಿಶಿಷ್ಟ ಪಂಗಡದ ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು : ಬಸವನಗೌಡ

ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ದಿಸೆಯಿಂದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಕಂಕಣ ಬದ್ಧವಾಗಿದೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಟಿ.ಟಿ.ಬಸವನ ಗೌಡ ಹೇಳಿದರು.
ಮೈಸೂರಿನ ಲಲಿತಮಹಲ್ ರಸ್ತೆಯಲ್ಲಿರುವ ಆಡಳಿತ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ರಾಜ್ಯ ಬುಡಕಟ್ಟು ಸಂಸ್ಥೆಯ ವತಿಯಿಂದ ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಸಮುದಾಯದವರಿಗಾಗಿ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಕುರಿತು ಏರ್ಪಡಿಸಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ರಾಜ್ಯದ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಕಂಡು ಬರುವ ಅರಣ್ಯ ಪ್ರದೇಶಗಳಲ್ಲಿ ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯದವರು ಬಹಳ ಕಷ್ಟಕರ ಜೀವನ ನಡೆಸುತ್ತಿದ್ದು ತೀರಾ ಹಿಂದುಳಿದಿದ್ದಾರೆ. ಇದನ್ನು ಮನಗಂಡ ಸರ್ಕಾರವು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಅನುಕೂಲವಾಗುವಂತೆ ವಿಶೇಷ ಯೋಜನೆಯನ್ನು ಸಿದ್ಧಪಡಿಸಿದೆ ಎಂದರು.
ಸರ್ಕಾರವು ರೂಪಿಸಿರುವ ವಿಶೇಷ ಯೋಜನೆಯಡಿ ಅವರಿಗೆ ಶಿಕ್ಷಣ ಕಲಿಯಲು ಅವರು ವಾಸಿಸುವ ಸ್ಥಳದಲ್ಲಿಯೇ ಶಾಲೆಗಳನ್ನು ತೆರೆದು ಅವರ ಮಕ್ಕಳಿಗೆ ವಿದ್ಯಾರ್ಜನೆ ನೀಡಲಾಗುತ್ತಿದೆ. ಈ ವೇಳೆ ಮಕ್ಕಳಿಗೆ ಅವಶ್ಯವಿರುವ ಪಠ್ಯಪುಸ್ತಕಗಳು, ಲೇಖನ ಸಾಮಾಗ್ರಿಗಳು ಸೇರಿದಂತೆ ವಿದ್ಯಾರ್ಜನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ತಮ್ಮ ಸಂಸ್ಥೆಯ ವತಿಯಿಂದ ನೀಡಲಾಗುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಪರಿಶಿಷ್ಟ ಪಂಗಡದ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕಾರ್ಯಗಾರದಲ್ಲಿ ಹಾಜರಿದ್ದ ಶಿಬಿರಾರ್ಥಿಗಳಲ್ಲಿ ಬಸವನಗೌಡ ಮನವಿ ಮಾಡಿದರು.
ಕಾರ್ಯಗಾರದಲ್ಲಿ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಅರಣ್ಯದಲ್ಲಿ ವಾಸಿಸುತ್ತಿರುವ ಒಂದು ನೂರಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳು ಹಾಜರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

Check Also

Close
error: