ಕರ್ನಾಟಕಪ್ರಮುಖ ಸುದ್ದಿಮೈಸೂರು

ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು : ಸಚಿವ ಸಿ‌.ಪಿ.ಯೋಗೀಶ್ವರ್‌ಗೆ ಸಂಸದ ಪ್ರತಾಪ್ ಸಿಂಹ ಟಾಂಗ್

ಪ್ರವಾಸೋದ್ಯಮ ಇಲಾಖೆಯವರ ತಲೆಯಲ್ಲಿ ಗೊಬ್ಬರ ತುಂಬಿದೆ : ಸಂಸದರಿಂದ ಅಧಿಕಾರಿಗಳ ತರಾಟೆ

ಮೈಸೂರು,ಏ.12:-  ಮೈಸೂರಿನಲ್ಲಿ ಹೆಲಿಟೂರಿಸಂ ಪ್ರಸ್ತಾವ ವಿಚಾರ‌ಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಪ್ರವಾಸೋದ್ಯಮ ಇಲಾಖೆಯವರು ಬಣ್ಣ ಬಣ್ಣದ ಕಾಗೆ ಹಾರಿಸಬಾರದು ಎಂದು  ಸಚಿವ ಸಿ‌.ಪಿ.ಯೋಗೀಶ್ವರ್‌ಗೆ   ಟಾಂಗ್ ನೀಡಿದರು.

ಸಂಸದ ಪ್ರತಾಪ್ ಸಿಂಹ ರವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಲಲಿತ ಮಹಲ್ ಹೆಲಿಪ್ಯಾಡ್  ಸಮೀಪ “ಹೆಲಿ ಟೂರಿಸಂ” ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ವೀಕ್ಷಣೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು  ಮಂಡ್ಯದಲ್ಲಿ ಡಿಸ್ನಿಲ್ಯಾಂಡ್, ಮೈಸೂರಿನಲ್ಲಿ ಹೆಲಿ ಟೂರಿಸಂ ಮಾಡ್ತೀವಿ ಅಂತಾರೆ.  ಇಂಥವೆಲ್ಲ ನಾವೂ ತುಂಬಾ ನೋಡಿದ್ದೇವೆ. ಎರಡು ಸಲ ಪ್ರಚಾರಕ್ಕೆ ಅಂತ ಮಾತಾಡ್ತಾರೆ. ಎರಡು ವರ್ಷ ಆದ್ಮೇಲೆ ಸಚಿವರು ಬದಲಾಗುತ್ತಾರೆ.  ಆ ಮೇಲೆ ಎಲ್ಲವೂ ಮರೆತು ಹೋಗುತ್ತೆ.  ಹೆಲಿ ಟೂರಿಸಂ ಅನ್ನುವ ಪದ ಮಾತ್ರ ಕೇಳಿದ್ದೇವೆ.  ಆ ಯೋಜನೆ ರೂಪುರೇಷೆ ಏನು ? ನಿಮ್ಮ ಬಳಿ ವಿಷನ್ ಡಾಕ್ಯುಮೆಂಟ್ ಎಲ್ಲಿದೆ ? ಯಾವ ಘನಕಾರ್ಯ ಮಾಡ್ತೀರಿ ಅಂತ ನಮಗೂ ಹೇಳಿ.  ಮೈಸೂರಿನಿಂದ ಕಾರವಾರ, ಬಳ್ಳಾರಿ, ಬೆಂಗಳೂರಿಗೆ ಹೆಲಿಕಾಪ್ಟರ್ ಸೇವೆ ಶುರು ಮಾಡುತ್ತೇವೆ ಅಂತೀರಿ.  ಮೈಸೂರಿನಿಂದ ಕಾರವಾರಕ್ಕೆ ಹೋಗಿ ನೋಡುವುದು ಏನಿದೆ ? ದಸರಾ ಸಂದರ್ಭದಲ್ಲಿ ಮಾಡುವ ಹೆಲಿರೈಡ್‌ ಗೇ ಜನರ ಬರೋದಿಲ್ಲ.  ಯೋಜನೆ ರೂಪಿಸುವ ಮುನ್ನ ಇದೆಲ್ಲವನ್ನೂ ಗಮನಿಸಬೇಕು. ಇಷ್ಟಾಗಿಯೂ ನಿಮಗೆ ಹೆಲಿಕಾಪ್ಟರ್ ಹಾರಿಸಬೇಕು ಅನ್ನಿಸಿದರೆ ಬನ್ನಿ ವಿಮಾನ ನಿಲ್ದಾಣದಲ್ಲಿ ನಾವೇ ಜಾಗ ಕೊಡುತ್ತೇವೆ.  ಕೇವಲ 10 ಮೀಟರ್ ದೂರದಲ್ಲಿ ರಾಜವಂಶಸ್ಥರಿಗೆ ಸೇರಿದ ಹೆಲಿಪ್ಯಾಡ್ ಇದೆ.  ಅದನ್ನು ಬಾಡಿಗೆ, ಭೋಗ್ಯಕ್ಕೆ ಕೇಳಿದ್ರೆ ಕೊಡಲ್ಲ ಅಂತಾರಾ ? ಹೆಲಿ ಟೂರಿಸಂ‌ಗೆ ನನ್ನ ವಿರೋಧ ಇದೆ.  ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿಎಂ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಹೆಲಿಟೂರಿಸಂ ಪ್ರಸ್ತಾವನೆ ಇರುವ ಸ್ಥಳಕ್ಕೆ   ಭೇಟಿ ನೀಡಿದ ವೇಳೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.   ಪ್ರವಾಸೋದ್ಯಮ ಇಲಾಖೆಯವರ ತಲೆಯಲ್ಲಿ ಗೊಬ್ಬರ ತುಂಬಿದೆ ಯಾವ ಘನಕಾರ್ಯ ಮಾಡಲು ಮುಂದಾಗಿದ್ದೀರಿ. ಮರಗಳ ತೊಗಟೆ ಹಿಡಿದು ಗುರುತು ಮಾಡಿದ್ದೀರಾ. ನಾನು ಮಲೆನಾಡಿನವನು, ನಿಮಗಿಂತ ಮರಗಳ ಬಗ್ಗೆ ಹೆಚ್ಚು ಗೊತ್ತು. ಬೇಸಿಗೆಯಲ್ಲಿ ಮರಗಳ ತೊಗಟೆ ತೆಗೆದರೆ ಮರಗಳಿಗೆ ತೊಂದರೆಯಾಗುತ್ತೆ. ಇದು‌ ನಿಮಗೆ ಗೊತ್ತಿಲ್ಲವ ಎಂದು ತರಾಟೆಗೆ ತೆಗೆದುಕೊಂಡರು. ಪ್ರವಾಸೋದ್ಯಮ ಇಲಾಖೆ‌ಯವರು ಹೇಳಿದರು ಎಂದು   ಅರಣ್ಯಧಿಕಾರಿಗಳು ಉತ್ತರಿಸಿದರು. ಇದಕ್ಕೆ ಕೆಂಡಮಂಡಲವಾದ ಸಂಸದರು ಪ್ರತಾಪ್ ಸಿಂಹ ಪ್ರವಾಸೋದ್ಯಮ ಇಲಾಖೆ‌ ಅಸಿಸ್ಟೆಂಟ್ ಡೈರೆಕ್ಟರ್ ರಾಘವೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಹೆಲಿಟೂರಿಸಂ ರೂಪರೇಷೆ ಏನು ಮಾಡಿಕೊಂಡಿದ್ದೀರಿ. ಈ ಹಿಂದೆ ಹೆಲಿಟೂರಿಸಂ ಮಾಡಿ ಯಾವುದು ಸಕ್ಸಸ್ ಆಗಿದೆ. ಸುಮ್ಮನೆ ಯೋಜನೆ ಅಂತ ಮಾಡುವುದಲ್ಲ. ಅದಕ್ಕೊಂದು ರೂಪರೇಷೆ ಬೇಕಲ್ಲವಾ. ಮರವನ್ನೆ ಕಡಿದು ಹೆಲಿಪ್ಯಾಡ್ ನಿರ್ಮಾಣಮಾಡಬೇಕಾ. 10 ಮೀಟರ್‌ ಪಕ್ಕದಲ್ಲಿ ಹೆಲಿಪ್ಯಾಡ್ ಇದೆ. ರಾಜಮನೆತನದವರನ್ನು ಕೇಳಿದರೆ ಬಾಡಿಗೆಗೆ ಹೆಲಿಪ್ಯಾಡ್ ಕೊಡಲ್ಲ ಅಂತಿದ್ರಾ ಎಂದು ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.

ಸಾರಿಗೆ ನೌಕರರ ಕುಟುಂಬಸ್ಥರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸಾರಿಗೆ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. 6ನೇ ವೇತನ ಆಯೋಗ ಜಾರಿಗೆ ತರಲು ಸಿಎಂ ಕಾಲಾವಕಾಶ ಕೇಳಿದ್ದಾರೆ. ನೌಕರರು ಪ್ರತಿಭಟನೆ ಮಾಡಲು ಪಕ್ವವಾದ ಕಾಲ ಇದಲ್ಲ, ನಿಗಮದ ಬಸ್ ಗಳಿಂದ ಈಗ ಆದಾಯವೇ ಬರುತ್ತಿಲ್ಲ, ಅವರು ಸಂಬಳ ಕೇಳಲಿ ಅದು ನ್ಯಾಯಯುತವಾಗಿದೆ ಆದರೆ ಪ್ರತಿಭಟನೆಗೆ ಜನರ ಬೆಂಬಲವೂ ಇಲ್ಲ, ಕಳೆದ ಒಂದು ವರ್ಷದಿಂದ ಕೊರೊನಾಕ್ಕೆ ಸಿಲುಕಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಸದ್ಯಕ್ಕೆ ಪ್ರತಿಭಟನೆ ಬೇಡ ಎಂದರು. ಪ್ರತಿಭಟನೆಗೆ ವಿರೋಧ ಪಕ್ಷಗಳ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ ಇವತ್ತು ನೌಕರರ ಬೆಂಬಲಕ್ಕೆ ನಿಂತಿರುವ ನಾಯಕರು ತಾವು ಅಧಿಕಾರದಲ್ಲಿದ್ದಾಗ ಯಾಕೆ ಸರ್ಕಾರಿ ನೌಕರರನ್ನಾಗಿ ಮಾಡಲಿಲ್ಲ, ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಿ ಅವರನ್ನು ಸರ್ಕಾರಿ ನೌಕರನ್ನಾಗಿಸಬೇಕಿತ್ತು, ಅದು ಬಿಟ್ಟು ಈಗ ಸುಖಾಸುಮ್ಮನೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: