ಮೈಸೂರು

ಸದ್ಯದಲ್ಲಿ ಪೂರ್ಣಗೊಳ್ಳಲಿರುವ ಜೋಡಿ ರೈಲು ಮಾರ್ಗ

ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗದ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದೆ.

ಶ‍್ರೀರಂಗಪಟ್ಟಣದ ರೈಲು ನಿಲ್ದಾಣದ ಬಳಿಯ ಟಿಪ್ಪುವಿನ ಶಸ್ತ್ರಾಗಾರದಿಂದಾಗಿ ಒಂದೂವರೆ ಕಿ.ಮೀ.ನಷ್ಟು ಬಾಕಿ ಉಳಿದಿದ್ದ ಸ‍್ಥಳದಲ್ಲಿನ ಕಾಮಗಾರಿ ಶೇ.95 ರಷ್ಟು ಪೂರ್ಣಗೊಂಡಿದ್ದು, ಏಪ್ರಿಲ್ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳುವ  ಸಾಧ್ಯತೆ ಇದೆ. ಶಸ್ತ್ರಾಗಾರವನ್ನು ಸ್ಥಳಾಂತರಿಸಿ ಒಂದು ತಿಂಗಳು ಕಳೆದಿದ್ದು, ಅದು ಮೊದಲು ಇದ್ದ ಜಾಗದಲ್ಲಿ ರೈಲು ಹಳಿಗಳನ್ನು ಹಾಕಲಾಗಿದೆ. ಫ್ಲಾಟ್ ಫಾರಂಗಳನ್ನು ಕಟ್ಟುವ ಕೆಲಸ ನಡೆಯುತ್ತಿದ್ದು, ಹಳಿಗಳ ಜೋಡಣಾ ಕಾರ್ಯ  ನಡೆಯುತ್ತಿದೆ.

ಮೇ ತಿಂಗಳಲ್ಲಿ ರೈಲು ಸುರಕ್ಷತಾ ಆಯೋಗದ ಸದಸ್ಯರು ಹಳಿಗಳನ್ನು ಪರೀಕ್ಷಿಸಿ ವರದಿ ನೀಡಲಿದ್ದು,  ನಂತರವಷ್ಟೇ ಇಲ್ಲಿ ಸಂಚಾರ ಆರಂಭಗೊಳ್ಳಲಿದೆ. ಸ್ಥಳಾಂತರಗೊಂಡ ಶಸ್ತ್ರಾಗಾರ ಉತ್ತಮ ಸ್ಥಿತಿಯಲ್ಲಿದೆ. ಸಾವಿರ ಟನ್ ತೂಕದ ಶಸ್ತ್ರಾಗಾರವನ್ನು 130 ಮೀಟರ್ ದೂರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಭೀಮ್ ಗಳ ಸಹಾಯದಿಂದ ಅಡಿಪಾಯಕ್ಕೆ ಹೊಸ ಕಂಬಗಳನ್ನು ಕಟ್ಟಲಾಗಿದ್ದು, ಅವುಗಳ ಕ್ಯೂರಿಂಗ್ ಕಾರ್ಯ ನಡೆಯುತ್ತಿದೆ. ಇನ್ನು 1 ತಿಂಗಳ ಕಾಲ ಕ್ಯೂರಿಂಗ್ ಆದರೆ ಶಸ್ತ್ರಾಗಾರ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: