
ಮೈಸೂರು
ರಂಜಾನ್ ಹಿನ್ನೆಲೆ: ಕೋವಿಡ್ ನಿಯಮ ಪಾಲಿಸುವಂತೆ ಮಸೀದಿಗಳಿಗೆ ಸೂಚನೆ; ಉಪಮೇಯರ್ ಅನ್ವರ್ ಬೇಗ್
ಮೈಸೂರು,ಏ.15-ಕೊರೊನಾ ಹೆಚ್ಚಾಗುತ್ತಿದ್ದು, ರಂಜಾನ್ ಆಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಮಸೀದಿಗಳಿಗೆ ತಿಳಿಸಲಾಗಿದೆ ಎಂದು ಉಪಮೇಯರ್ ಅನ್ವರ್ ಬೇಗ್ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಕಳೆದ ಬಾರಿ ರಂಜಾನ್ ವೇಳೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿರಲಿಲ್ಲ. ಈ ಬಾರಿ ಕೆಲವು ನಿರ್ಬಂಧಗಳನ್ನು ವಿಧಿಸಿ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಕೊರೊನಾ ತಡೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.
ಮಾರ್ಗಸೂಚಿಯ ಕುರಿತು ಮಸೀದಿಗಳ ಮುಖ್ಯಸ್ಥರು, ಪೊಲೀಸರೊಂದಿಗೆ ಸಭೆ ನಡೆಸಲಾಗಿದೆ ಎಂದ ಅವರು, ಮಸೀದಿಗಳಲ್ಲಿ ನಮಾಜ್ ಮಾಡುವ ವೇಳೆ ಸಾಮಾಜಿಕ ಅಂತರ ಪಾಲಿಸುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು, 60 ವರ್ಷ ಮೇಲ್ಪಟ್ಟವರು, ಮಕ್ಕಳು ಮಸೀದಿಗೆ ಬರುವಂತಿಲ್ಲ ಸೇರಿದಂತೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಇನ್ನು ಎನ್.ಆರ್.ಕ್ಷೇತ್ರದಲ್ಲಿ ಜನರು ಹೆಚ್ಚಾಗಿ ಕೊರೊನಾ ಲಸಿಕೆ ಪಡೆಯದಿರುವ ಬಗ್ಗೆ ಮಾತನಾಡಿದ ಅವರು, ಲಸಿಕೆ ಪಡೆದುಕೊಳ್ಳುವಂತೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಆದರೂ ಜನ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರಂಜಾನ್ ವೇಳೆ ಉಪವಾಸ ಮಾಡುತ್ತಿರುತ್ತಾರೆ. ಈ ವೇಳೆ ಲಸಿಕೆ ತೆಗೆದುಕೊಂಡರೆ ತೊಂದರೆಯಾಗುತ್ತದೆ ಎಂಬ ಆತಂಕ ಹಾಗೂ ತಪ್ಪು ಸಂದೇಶಗಳಿಂದ ಜನ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇಂದು ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ನಗರಪಾಲಿಕೆಯ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇಂದು ಸಹ ಇಬ್ಬರು ನೌಕರರು ಮೃತಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಆಯುಕ್ತರೊಂದಿಗೆ ಸಭೆ ನಡೆಸಿ ಪಾಲಿಕೆಗೆ ಬರುವ ಜನರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. (ಎಚ್.ಎನ್, ಎಂ.ಎನ್)