ಮೈಸೂರು

ಬೆಂಕಿಗೆ ಆಹುತಿಯಾದ ಸ್ಥಳದಲ್ಲೇ ಗ್ರಂಥಾಲಯ ಸ್ಥಾಪನೆ: ಜಂಟಿ ಹೇಳಿಕೆ ಬಿಡುಗಡೆ

ದಾನಿಗಳ ನೆರವು ಸಂಗ್ರಹಕ್ಕೆ ಪ್ರತ್ಯೇಕ ಬ್ಯಾಂಕ್ ಖಾತೆ

ಮೈಸೂರು, ಏ .15:-  ಮಹಾನಗರ ಪಾಲಿಕೆ, ಮುಡಾ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ರಾಜೀವ್ ನಗರ 2ನೇ ಹಂತದಲ್ಲಿ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಸಾರ್ವಜನಿಕ ಗ್ರಂಥಾಲಯ ಬೆಂಕಿಗೆ ಆಹುತಿಯಾದ ಸ್ಥಳದಲ್ಲಿಯೇ ನೂತನ ಕಟ್ಟಡ ನಿರ್ಮಿಸಿ, ಗ್ರಂಥಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತರು, ಮುಡಾ ಆಯುಕ್ತರು ಹಾಗೂ ಗ್ರಂಥಾಲಯ ಉಪನಿರ್ದೇಶಕರು ಜಂಟಿ ಹೇಳಿಕೆ ನೀಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸದರಿ ನಿವೇಶನವನ್ನು ನೀಡಲು ಒಪ್ಪಿಗೆ ನೀಡಿದ್ದು, ಗ್ರಂಥಾಲಯ ಕಟ್ಟಡ ನಿರ್ಮಾಣ ಮಾಡಲು ಈ ಸಂಬಂಧ ಈಗಾಗಲೇ ವಿವಿಧ ಸಂಘ ಸಂಸ್ಥೆಗಳು, ಹಲವಾರು ಗಣ್ಯರು ಸೈಯದ್‌ಇಸಾಕ್ ಅವರಿಗೆ ದೇಣಿಗೆ ನೀಡಿರುವ ಹಣವನ್ನು ಮತ್ತು ಮುಂದಿನ ದಿನಗಳಲ್ಲಿ ಈ ಸಂಬಂಧ ದಾನಿಗಳಿಂದ ಸಂಗ್ರಹವಾಗುವ ಹಣವನ್ನು ಬಳಸಿಕೊಳ್ಳಲಾಗುವುದು.

ಸದರಿ ಮೊತ್ತದಲ್ಲಿ ಉತ್ತಮವಾದ, ಮಾದರಿ ಗ್ರಂಥಾಲಯ ಮತ್ತು ಅತ್ಯಾಧುನಿಕ ವ್ಯವಸ್ಥೆಗಳಿರುವ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು. ಹಣವನ್ನು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಹಾಗೂ ಮೈಸೂರು ನಗರಗ್ರಂಥಾಲಯ ಪ್ರಾಧಿಕಾರದ ಸದಸ್ಯರುಗಳು ಮತ್ತು ಸೈಯದ್‌ಇಸಾಕ್ ಇವರುಗಳ ಸಾಮೂಹಿಕ ಜವಾಬ್ದಾರಿಯಡಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು, ಮೈಸೂರು ನಗರ ಗ್ರಂಥಾಲಯ ಪ್ರಾಧಿಕಾರ ವತಿಯಿಂದ ಪಾರದರ್ಶಕವಾಗಿ ನಿರ್ವಹಣೆ ಮಾಡಲಾಗುತ್ತದೆ.

ದಾನಿಗಳಿಂದ ಸಂಗ್ರಹವಾಗುವ ಹಣವನ್ನು ಗ್ರಂಥಾಲಯ ಕಟ್ಟಡ ನಿರ್ಮಾಣ ಹಾಗೂ ಗ್ರಂಥಾಲಯ ಸ್ಥಾಪನೆಗೆ ಬಳಸಿಕೊಂಡು, ಉಳಿಯುವ ಹಣವನ್ನು ನಿಶ್ಚಿತ ಠೇವಣಿಯಲ್ಲಿಟ್ಟು, ಬರುವ ಬಡ್ಡಿಯ ಮೊತ್ತವನ್ನು ಇದೇ ಗ್ರಂಥಾಲಯದ ಅಭಿವೃದ್ಧಿಗೆ ಬಳಸಲಾಗುವುದು ಹಾಗೂ ಸೈಯದ್‌ಇಸಾಕ್ ಅವರ ಜೀವನೋಪಾಯಕ್ಕೆ ಪ್ರತೀ ತಿಂಗಳು ಲಭ್ಯವಿರುವ ಮೊತ್ತವನ್ನು ಗೌರವ ಸಂಭಾವನೆ ರೂಪದಲ್ಲಿ ನೀಡಲಾಗುವುದು.

ಆದ್ದರಿಂದ ಸೈಯದ್‌ಇಸಾಕ್ ಅವರಿಗೆ ದೇಣಿಗೆ ನೀಡಲಿಚ್ಚಿಸುವ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ, ಹಾಗೂ ಗಣ್ಯರಿಗೆ ಈ ಮೂಲಕ ಕೋರಿಕೊಳ್ಳುವುದೇನೆಂದರೆ, ಈ ಸಂಬಂಧ ಈಗಾಗಲೇ ನಿರ್ಧರಿಸಿರುವಂತೆ ಮೈಸೂರು ನಗರಗ್ರಂಥಾಲಯ ಪ್ರಾಧಿಕಾರ ವತಿಯಿಂದ ಒಂದು ಪ್ರತ್ಯೇಕ ಬ್ಯಾಂಕ್‌ಖಾತೆಯನ್ನು ತೆರೆದಿದ್ದು, ಸದರಿ ಬ್ಯಾಂಕ್ ಖಾತೆಗೆ ದೇಣಿಗೆ ಮೊತ್ತವನ್ನು ಜಮಾ ಮಾಡಬೇಕು. ಯಾವುದೇ ಕಾರಣಕ್ಕೂ ಯಾವುದೇ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ನೀಡಬಾರದೆಂದು ತಿಳಿಸಿದೆ.

ದಾನಿಗಳು ಪುಸ್ತಕ, ಪೀಠೋಪಕರಣ, ಕಂಪ್ಯೂಟರ್‌ಗಳು, ಇತ್ಯಾದಿ ಉಪಕರಣಗಳನ್ನು ಸಹ ನೀಡಬಹುದಿದ್ದು, ಗ್ರಂಥಾಲಯಕಟ್ಟಡ ಪೂರ್ಣವಾಗುವವರೆಗೆ, ಇವುಗಳನ್ನು ಉಪನಿರ್ದೇಶಕರ ಕಛೇರಿ, ನಗರ ಕೇಂದ್ರ ಗ್ರಂಥಾಲಯ, ಸಯ್ಯಾಜಿರಾವ್‌ರಸ್ತೆ, ಮೈಸೂರು. ಇಲ್ಲಿ ಸಂಗ್ರಹಿಸಿಡಲಾಗುವುದು ಹಾಗೂ ಗ್ರಂಥಾಲಯಕಟ್ಟಡ ಸಂಪೂರ್ಣವಾದ ನಂತರ ಸದರೀ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು.

ಆದ್ದರಿಂದ ಇವುಗಳನ್ನು ಈ ಮೇಲೆ ತಿಳಿಸಲಾದ ವಿಳಾಸಕ್ಕೆ ಕಳುಹಿಸಬೇಕೆಂದು ಕೋರಿದೆ.
ಬ್ಯಾಂಕ್‌ಖಾತೆ ವಿವರ: ಖಾತೆ ಸಂಖ್ಯೆ: 40137132558, ಬ್ಯಾಂಕ್ ಮತ್ತು ಶಾಖೆ : ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ, ಮೈಸೂರು ಮೆಡಿಕಲ್ ಕಾಲೇಜು ಶಾಖೆ, ಐ.ಎಫ್.ಎಸ್.ಸಿ. ಕೋಡ್: SBIN0040875 ಖಾತೆದಾರರ ಹೆಸರುಗಳು: 1. ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, 2. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು, 3. ಸಾರ್ವಜನಿಕಗ್ರಂಥಾಲಯ ಇಲಾಖೆ, ನಗರಕೇಂದ್ರ ಗ್ರಂಥಾಲಯ ಉಪನಿರ್ದೇಶಕರುಗಳದ್ದಾಗಿರುತ್ತದೆ.
ಗ್ರಂಥಾಲಯಕಟ್ಟಡ ನಿರ್ಮಾಣ ಕಾರ‍್ಯವನ್ನು ಮೈಸೂರು ನಿರ್ಮಿತಿಕೇಂದ್ರದಿಂದ ಕೈಗೊಳ್ಳಲಾಗುತ್ತಿದ್ದು, ದೇಣಿಗೆ ನೀಡಿರುವ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಬಹುದು. ಹಾಗೂ ಸಲಹೆ ಸೂಚನೆಗಳನ್ನು ನೀಡಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: