ಪ್ರಮುಖ ಸುದ್ದಿಮೈಸೂರು

ಹೆಲಿಟೂರಿಸಂ ವಿವಾದ: 2ನೇ ಹಂತದ ವಿಚಾರಣೆಗೆ ಅಧಿಕಾರಿಗಳಿಗೆ ತುರ್ತು ನೋಟಿಸ್ ಜಾರಿ

ಮೈಸೂರು,ಏ.17-ಹೆಲಿಟೂರಿಸಂ ಯೋಜನೆ ಸಂಬಂಧ ಮೇ 27 ರಂದು ನಡೆಯಲಿರುವ 2ನೇ ಹಂತದ ವಿಚಾರಣೆಗೆ ಮೈಸೂರು ಜೆಎಂಎಫ್ ಸಿ ನ್ಯಾಯಾಲಯ ತುರ್ತು ನೋಟಿಸ್ ಜಾರಿಗೊಳಿಸಿದೆ.

ಎರಡನೇ ಹಂತದ ವಿಚಾರಣೆಗೆ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು, ಡಿಸಿಎಫ್ ಹಾಗೂ ನಗರಪಾಲಿಕೆ ಆಯುಕ್ತರು ಹಾಜರಾಗುವಂತೆ ಆದೇಶಿಸಿ ನ್ಯಾಯಾಲಯ ನಿನ್ನೆ ನೋಟಿಸ್ ಜಾರಿಗೊಳಿಸಿದೆ.

ಲಲಿತಮಹಲ್ ಬಳಿ ಮರಗಳನ್ನು ಕಡಿದು ಹೆಲಿಟೂರಿಸಂ ಮಾಡುತ್ತಿರುವುದಕ್ಕೆ ತಡೆಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ನ್ಯಾಯಾಲಯ ತುರ್ತು ನೋಟಿಸ್ ಜಾರಿಗೊಳಿಸಿದೆ. ನೂರಾರು ಜೀವಸಂಕುಲಕ್ಕೆ ಆಶ್ರಯ ಒದಗಿಸಿರುವ ಲಲಿತಮಹಲ್ ಮುಂಭಾಗದಲ್ಲಿ 624ಕ್ಕೂ ಹೆಚ್ಚು ಮರಗಳನ್ನು ಹೆಲಿಟೂರಿಸಂ ನೆಪದಲ್ಲಿ ಕತ್ತರಿಸಲು ಪ್ರವಾಸೋದ್ಯಮ ಇಲಾಖೆ ಗುರುತು ಹಾಕಿತ್ತು.

ಈ ನಡೆಯನ್ನು ಖಂಡಿಸಿ ಪರಿಸರವಾದಿ ಭಾನು ಮೋಹನ್ ಹಾಗೂ ಮೈಸೂರು ಗ್ರಾಹಕರ ಪರಿಷತ್ ಕೆ.ಎಸ್.ವೆಂಕಟೇಶ್ ಏ.8 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 12 ರಂದು ಪ್ರಕರಣ (ನೋಂ.ಸಂ.416/2021-ಸಿಎನ್ ಆರ್ ಸಂ.-ಕೆಎಎಂಎಸ್030035802021) ದಾಖಲಿಸಲಾಗಿತ್ತು. ಜತೆಗೆ ರಾಷ್ಟ್ರಪತಿ ಭವನ ಹಾಗೂ ಗ್ರೀನ್ ಟ್ರಿಬ್ಯೂನಲ್ ಗೂ ಪತ್ರ ಬರೆಯಲಾಗಿತ್ತು. ಏ.15 ರಂದು ಮೊದಲ ಹಂತದ ವಿಚಾರಣೆ ಪೂರ್ಣಗೊಂಡಿದ್ದು, ಮೇ 27ಕ್ಕೆ 2ನೇ ಹಂತದ ವಿಚಾರಣೆ ನಿಗದಿಯಾಗಿದೆ. (ಎಂ.ಎನ್)

Leave a Reply

comments

Related Articles

error: