ದೇಶಪ್ರಮುಖ ಸುದ್ದಿಮನರಂಜನೆ

ನಟ ಸೋನು ಸೂದ್ ಗೆ ಕೋವಿಡ್ ಪಾಸಿಟಿವ್

ಮುಂಬೈ,ಏ.17-ಬಾಲಿವುಡ್ ನಟ ಸೋನು ಸೂದ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ತನಗೆ ಕೊರೊನಾ ವೈರಸ್ ಸೋಂಕು ಬಾಧಿಸಿದ್ದರೂ ತನ್ನ ಮನಸ್ಸು ಹಾಗೂ ಸ್ಫೂರ್ತಿ ಪಾಸಿಟಿವ್ ಆಗಿದೆ ಎಂದಿದ್ದಾರೆ.

ನನಗೆ ಕೋವಿಡ್-19 ಸೋಂಕು ತಗಲಿರುವುದು ಇಂದು ಬೆಳಗ್ಗೆ ದೃಢಪಟ್ಟಿದೆ. ಮುನ್ನಚ್ಚರಿಕಾ ಕ್ರಮವಾಗಿ ನಾನು ಈಗಾಗಲೆ ಸ್ವಯಂ ಕ್ವಾರಂಟೈನ್ ನಲ್ಲಿದ್ದೇನೆ. ಹೆಚ್ಚು ಕಾಳಜಿ ವಹಿಸಿದ್ದೇನೆ.ಆದರೆ ಚಿಂತಿಸಬೇಡಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನನಗೆ ಸ್ವಲ್ಪ ಸಮಯ ನೀಡಿದೆ. ನೆನಪಿಡಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ.

ಈ ತಿಂಗಳಾರಂಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸೋನು ಅವರನ್ನು ಪಂಜಾಬ್ ಕೋವಿಡ್ ಲಸಿಕೆ ನೀಡಿಕೆ ಅಭಿಯಾನದ ಸದ್ಬಾವನಾ ರಾಯಭಾರಿಯನ್ನಾಗಿ ನೇಮಿಸಿದ್ದರು. ‘ನನ್ನ ತಾಯ್ನಾಡಿನ ಜನರ ಜೀವಗಳನ್ನು ರಕ್ಷಿಸುವ ಪಂಜಾಬ್ ಸರ್ಕಾರದ ಈ ಬೃಹತ್ ಅಭಿಯಾನದಲ್ಲಿ ಪಾತ್ರವನ್ನು ವಹಿಸುತ್ತಿರುವುದು ನನ್ನ ಆಶೀರ್ವಾದ’ ಎಂದು ಅವರು ಹೇಳಿಕೊಂಡಿದ್ದರು. ಏ.8 ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಸಹ ಪಡೆದುಕೊಂಡಿದ್ದರು.

ಕಳೆದ ವರ್ಷ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸೋನು ಸೂದ್ ಅವರು ವಲಸೆ ಕಾರ್ಮಿಕರಿಗೆ ನೆರವಾಗಿದ್ದರು. ಅಲ್ಲಲ್ಲಿ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಗ್ರಾಮಕ್ಕೆ ತಲುಪಿಸಿದ್ದರು. ವಸತಿ ವ್ಯವಸ್ಥೆ ಮಾಡಿದ್ದು, ಆರ್ಥಿಕವಾಗಿಯೂ ಸಹ ಸಹಾಯ ಮಾಡಿದ್ದರು. ಇವರ ಈ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: