ಕರ್ನಾಟಕಪ್ರಮುಖ ಸುದ್ದಿ

ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ನಿಧನ: ಸಿಎಂ ಯಡಿಯೂರಪ್ಪ ಸೇರಿದಂತೆ ಗಣ್ಯರಿಂದ ಸಂತಾಪ

ಬೆಂಗಳೂರು,ಏ.19- ಸಾರಸ್ವತ ಲೋಕದಲ್ಲಿ ಜಿ.ವಿ ಎಂದೇ ಪ್ರಸಿದ್ಧರಾಗಿದ್ದ ನಿಘಂಟು ತಜ್ಞ, ಶಬ್ಧ ಬ್ರಹ್ಮ ಪದ್ಮಶ್ರೀ ಪ್ರೊ.ಜಿ ವೆಂಕಟಸುಬ್ಬಯ್ಯ ಅವರು ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಸಿಎಂ ಬಿಎಸ್ವೈ ಅವರು, ಹಿರಿಯ ವಿದ್ವಾಂಸರು, ನಿಘಂಟು ತಜ್ಞ, ಶತಾಯುಷಿ, ನಾಡೋಜ, ಪದ್ಮಶ್ರೀ ಪ್ರೊ ಜಿ.ವೆಂಕಟಸುಬ್ಬಯ್ಯರವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ಭಾಷಾ ತಜ್ಞರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಶಿಕ್ಷಕರಾಗಿ ಕನ್ನಡಕ್ಕೆ ಅಪಾರ ಸೇವೆ ಸಲ್ಲಿಸಿರುವ ಆ ಅಕ್ಷರ ತಪಸ್ವಿಗಳ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಅಪೂರ್ವ ಸಾಧನೆಗಳು ಕನ್ನಡಿಗರ ಪಾಲಿಗೆ ಚಿರಸ್ಥಾಯಿಯಾಗಿದೆ. ಪ್ರೊ ವೆಂಕಟಸುಬ್ಬಯ್ಯನವರ ಪಾದಗಳಿಗೆ ಅಂತಿಮ ನಮನಗಳನ್ನು ಸಲ್ಲಿಸುತ್ತಾ, ಅವರ ಆತ್ಮಕ್ಕೆ ಸದ್ಗತಿಯನ್ನು, ಅವರ ಕುಟುಂಬದವರಿಗೆ ಮತ್ತು  ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದಿದ್ದಾರೆ.

ಸಿದ್ದರಾಮಯ್ಯ ಅವರು, ‘ಶಬ್ದಬ್ರಹ್ಮ’ನೆಂದೇ ಖ್ಯಾತಿ ಪಡೆದಿರುವ ಹಿರಿಯ ಸಾಹಿತಿ, ಭಾಷಾ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನ ಕನ್ನಡ ಸಾರಸ್ವರ ಲೋಕಕ್ಕೆ ತುಂಬಿಬಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ‌ಕೋರುವೆ. ಪ್ರೊ.ಜಿ.ವೆಂಕಟುಸುಬ್ಬಯ್ಯ ಅವರ ಕುಟುಂಬ ಮತ್ತು‌‌ ಸಮಸ್ತ‌ ಕನ್ನಡಿಗರ ಶೋಕದಲ್ಲಿ‌ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಅವರು, ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದ್ದಾರೆ.

ಅಲ್ಲದೇ ನಾಡು-ನುಡಿಯ ಶ್ರೇಷ್ಠ ವಿದ್ವಾಂಸಕನನ್ನು ರಾಜ್ಯ ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗದವರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಶ್ವತ್ಥನಾರಾಯಣ ಅವರು, ಕನ್ನಡದ ವಿದ್ವಾಂಸ, ನಿಘಂಟು ತಜ್ಞ ನಾಡೋಜ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಅಗಲಿಕೆಯ ಸುದ್ದಿ ದುಃಖ ತಂದಿದೆ. ಅಕ್ಷರ ಲೋಕದ ಅಜಾತಶತ್ರು ಆಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಭಗವಂತನು ಕುಟುಂಬ-ಹಿತೈಷಿ ವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

ಡಾ.ಕೆ.ಸುಧಾಕರ್ ಅವರು, ನಿಘಂಟು ಬ್ರಹ್ಮ, ಶಬ್ಧರ್ಷಿ, ನಾಡೋಜ, ಪದ್ಮಶ್ರೀ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಿದೆ. ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿರುವ ಶ್ರೀಯುತರು ಕನ್ನಡ ಭಾಷೆಯ ಸಿರಿವಂತಿಕೆವನ್ನು ಶ್ರೀಮಂತಗೊಳಿಸಿದ್ದಾರೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಸಂಖ್ಯಾತ ಶಿಷ್ಯಕೋಟಿಗೆ, ಅಭಿಮಾನಿ ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: