ಮೈಸೂರು

ಪೌರಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲೂ ಸಿದ್ಧ : ಎಂ. ಶಿವಣ್ಣ  ಕಿಡಿ

ಮೈಸೂರು, ಏ.19:- ಪೌರಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲೂ ಸಿದ್ಧ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ. ಶಿವಣ್ಣ  ಗುಡುಗಿದರು.

ಅವರಿಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ  ಅಲ್ಲಿನ ಪೌರಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಚಾಮುಂಡಿ ಬೆಟ್ಟದಲ್ಲಿ 45 ರಿಂದ 50 ಪೌರಕಾರ್ಮಿಕರ ಕುಟುಂಬಗಳಿವೆ.  ಅಲ್ಲಿಯ ಪೌರಕಾರ್ಮಿಕರ ಕಾಲೋನಿಯಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಕಾಲೋನಿ ದುಃಸ್ಥಿತಿ ಕುರಿತು ಸಾಕಷ್ಟು ದೂರುಗಳು ಬಂದಿತ್ತು. ಅಲ್ಲಿನ ನಿವಾಸಿಯೊಬ್ಬರು ಅಲ್ಲಿನ ಸಮಸ್ಯೆಗಳ ಕುರಿತು ವಿಡಿಯೋ ಮಾಡಿರುವುದು ನನ್ನ ಗಮನಕ್ಕೆ ಬಂದಿತ್ತು. ಅಲ್ಲಿನ ವಾಸ್ತವತೆ ಪರಿಶೀಲಿಸಲು ಭೇಟಿ ನೀಡಿ ಬಂದಿದ್ದೇನೆ. ಅಲ್ಲಿನ ಸ್ಥಿತಿ ನಿಜಕ್ಕೂ ಶೋಚನೀಯವಾದದ್ದು ಎಂದರು.
ಅಲ್ಲಿನ ಪೌರಕಾರ್ಮಿಕರು ವಾಸ ಮಾಡುವುದಕ್ಕೆ ಯೋಗ್ಯವಲ್ಲದ ಮನೆಗಳು, ಗುಡಿಸಲಿನಲ್ಲಿ ವಾಸವಾಗಿದ್ದಾರೆ. ಯಾರಿಗೂ ಇನ್ನೂ ಹಕ್ಕುಪತ್ರ ದೊರಕಿಲ್ಲ. ಮಲ ಮೂತ್ರ ಹರಿಯುವ ಜಾಗದಲ್ಲೇ ವಾಸಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಅಲ್ಲಿನ ಜನ ವಂಚಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಇಓ ಅವರಿಗೆ ನಿರ್ದೇಶನ ನೀಡಿದ್ದೇನೆ. ಅಲ್ಲಿನ ಸ್ಥಿತಿ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಜಿಲ್ಲಾಧಿಕಾರಿ, ತಹಶೀಲ್ದಾರ್, ಇಓ, ಎಲ್ಲರನ್ನೂ ಸೇರಿಸಿಕೊಂಡು ಸಭೆ ನಡೆಸಿ ಅಲ್ಲಿನ ನಿವಾಸಿಗಳ ಸಮಸ್ಯೆ ಬಗೆಹರಿಸಲಾಗುವುದು. ಕಾಲೋನಿಯಲ್ಲಿ 65 ವರ್ಷ ಮೇಲ್ಪಟ್ಟ ಸಾಕಷ್ಟು ಜನರಿದ್ದಾರೆ. ಅವರಿಗೆ ಈ ಕೂಡಲೇ ವೃದ್ಧಾಪ್ಯ ವೇತನ ನೀಡುವಂತೆ ಆದೇಶ ನೀಡಿದ್ದೇನೆ ಎಂದು ತಿಳಿಸಿದರು.
ಪೌರಕಾರ್ಮಿಕರಿಗೆ ಕೊರೋನಾ ಸುರಕ್ಷತಾ ಪರಿಕರಗಳನ್ನು ನೀಡಿಲ್ಲ. ಸದ್ಯದಲ್ಲೇ ಮೇಯರ್ ಜೊತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸುತ್ತೇನೆ.
ಬರೀ ಕೈಯಿಂದಲೇ ತ್ಯಾಜ್ಯವನ್ನು ನಿರ್ವಹಣೆ ಮಾಡುತ್ತಿರುವುದು ಖುದ್ದು ನಾನೇ ಕಂಡಿದ್ದೇನೆ.  ಪೌರಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂತಹ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲೂ ಸಿದ್ಧ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: