ಮೈಸೂರು

ಕುಲಪತಿ ಹಾಗು ಕುಲಸಚಿವರ ವರ್ತನೆ ಮೈಸೂರು ವಿವಿಯ ಘನತೆಗೆ ಕುಂದು

ಶತಮಾನೋತ್ಸವ ಕಂಡ ರಾಜ್ಯದ ಘನತೆಯ ಮೈಸೂರು ವಿವಿಯ ಇತ್ತೀಚಿನ ಘಟನೆಗಳಿಂದ ಮುಂದಿನ ದಿನಗಳಲ್ಲಿ ಜನ ಮನ್ನಣೆಯನ್ನು ಕಳೆದುಕೊಳ್ಳುವ ಆತಂಕವನ್ನು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ ವ್ಯಕ್ತಪಡಿಸಿದರು.  ಕುಲಪತಿ ಹಾಗೂ ಕುಲಸಚಿವರ ನಡುವೆ ನಡೆಯುತ್ತಿರುವ ಕೆಸರೆರಚಾಟ ವಿವಿಯ ಗೌರವವನ್ನು ಅಧೋಗತಿಗೆ ತರುತ್ತಿದ್ದು ಈ ಬಗ್ಗೆ ಪ್ರಗತಿಪರ ಚಿಂತಕರು ಇವರಿರ್ವರ ವೈಮನಸ್ಸನ್ನು ಬಗೆಹರಿಸಬೇಕೆಂದು  ಒತ್ತಾಯಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ವಿವಿಯ ಉನ್ನತ ಸ್ಥಾನದಲ್ಲಿರುವ ಇವರೀರ್ವರು ದಲಿತರೇ, ಇವರುಗಳ ಸ್ಥಾನಗಳನ್ನು ಕಸಿದುಕೊಳ್ಳಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು ಇದರಿಂದ ಜಾಗೃತರಾಗಬೇಕು ಎಂದು ಕೋರಿದ ಅವರು, ಕುಲಸಚಿವ ಪ್ರೊ.ರಾಜಣ್ಣ ಅಕ್ರಮವಾಗಿ ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಬಗ್ಗೆ ಬಂದಿರುವ ಆರೋಪ ಸಮಂಜಸವಲ್ಲ. ನೌಕರರನ್ನು  ನೇಮಕಾತಿ ಮಾಡಿಕೊಳ್ಳುವ ಹಾಗೂ ವಜಾಗೊಳಿಸುವ ಅಧಿಕಾರ ಅವರಿಗಿಲ್ಲ. ಆದ್ದರಿಂದ ಕುಲಪತಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಮನವಿ ಮಾಡಿದರು.

ಆಡಳಿತದಿಂದ ದೂರವಿರಿ : ಮೈಸೂರು ವಿವಿಯ ವಿದ್ಯಾರ್ಥಿಗಳು ಪದೇ ಪದೇ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ತರವಲ್ಲ, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಆಡಳಿತದ ವಿಚಾರದಲ್ಲಿ ಮೂಗು ತೂರಿಸದೇ ವಿದ್ಯಾಬ್ಯಾಸದ ಕಡೆ ಹೆಚ್ಚು ಗಮನಹರಿಸಿ ಎಂದ ಅವರು, ಕುಲಸಚಿವ ಹಾಗೂ ಕುಲಪತಿಗಳ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದಿಂದಾಗಿ ವಿವಿಯ ಐಕ್ಯತೆಗೆ ಕುತ್ತು ಒದಗಲಿದ್ದು ಈ ಬಗ್ಗೆ ರಾಜ್ಯಪಾಲರು ಮಧ್ಯ ಪ್ರವೇಶಿಸಿ ವಿವಾದವನ್ನು  ಬಗೆಹರಿಸಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಖಜಾಂಚಿ ಕೆರೆಹಳ್ಳಿ ಮಾದೇಶ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಕುಮಾರ್, ನಗರಾಧ್ಯಕ್ಷ ರಾಜು ಮಾರ್ಕೆಟ್ ಶ್ರೀನಿವಾಸ್ ಕಡಕೊಳ ಹಾಗೂ ವಿಶ್ವಕರ್ಮ ವೇದಿಕೆ ಅಧ್ಯಕ್ಷ ಕೆಂಡಗಣ  ಹಾಜರಿದ್ದರು.(ಕೆ.ಎಂ.ಆರ್)

Leave a Reply

comments

Related Articles

error: