ದೇಶಪ್ರಮುಖ ಸುದ್ದಿ

ಕೊರೊನಾ ಲಸಿಕಾ ಉತ್ಪಾದಕ ಕಂಪನಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ನವದೆಹಲಿ,ಏ.20-ಕೋವಿಡ್ 19 ಲಸಿಕಾ ಉತ್ಪಾದಕ ಕಂಪನಿಗಳ ಜೊತೆಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಭೆ ನಡೆಸಲಿದ್ದಾರೆ.

ಇಂದು ಸಂಜೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದ್ದು, ಜೈವಿಕ ತಂತ್ರಜ್ಞಾನ ಇಲಾಖೆಯು ಎಲ್ಲ ಉತ್ಪಾದಕ ಕಂಪನಿಗಳ ಸಮ್ಮುಖದಲ್ಲಿ ಮಾಹಿತಿಯನ್ನು ಪ್ರಸ್ತುತ ಪಡಿಸಲಿದೆ. ಈ ವೇಳೆಗ ದೇಶ ಮತ್ತು ವಿದೇಶದ ಔಷಧಿ ಉತ್ಪಾದಕ ಕಂಪನಿಗಳು ಹಾಗೂ ಈಗಾಗಲೇ ಲಸಿಕೆ ಉತ್ಪಾದಿಸುವುದಕ್ಕೆ ಅನುಮೋದನೆ ಪಡೆದಿರುವ ಕಂಪನಿಗಳು ಭಾಗವಹಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮೇ 1ರಿಂದ ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು. ಹೀಗಾಗಿ ದೇಶದಲ್ಲಿ ಲಸಿಕೆಯ ಕೊರತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೋದಿ ಅವರು ಲಸಿಕಾ ಉತ್ಪಾದಕ ಕಂಪನಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ವಿಶ್ವದಲ್ಲಿ ಈಗಾಗಲೇ ಅನುಮೋದನೆ ಪಡೆದಿರುವ ಫೈಜರ್, ಮಾಡರ್ನಾ, ಜಾನ್ಸನ್ ಆಂಡ್ ಜಾನ್ಸನ್ ಕಂಪನಿ ಲಸಿಕೆಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳವ ಬಗ್ಗೆ ಚಿಂತಿಸಲಾಗುತ್ತಿದೆ.

ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆ ವಿತರಿಸುವುದಕ್ಕೂ ಅನುಮೋದನೆ ನೀಡಲಾಗಿದೆ. ಭಾರತದ ರೆಡ್ಡೀಸ್ ಪ್ರಯೋಗಾಲಯದಲ್ಲಿ ಈ ಸ್ಪುಟ್ನಿಕ್-ವಿ ಲಸಿಕೆಯನ್ನು ಉತ್ಪಾದಿಸುವುದಕ್ಕೆ ಅನುಮತಿ ನೀಡಲಾಗಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: