ಪ್ರಮುಖ ಸುದ್ದಿಮನರಂಜನೆ

ಮತ್ತೆ ಕೊರೊನಾತಂಕ ಎದುರಿಸಿದ ನಟಿ ಮೇಘನಾ ರಾಜ್: ಕೊರೊನಾ ಹರಡದಂತೆ ತಡೆಯೋಣ ಎಂದು ಮನವಿ

ಬೆಂಗಳೂರು,ಏ.21-ನಟಿ ಮೇಘನಾ ರಾಜ್ ಗೆ ಮತ್ತೆ ಕೊರೊನಾತಂಕ ಎದುರಾಗಿತ್ತು. ಸದ್ಯ ಅವರು ಆತಂಕದಿಂದ ಹೊರಬಂದಿದ್ದು, ಕೊರೊನಾ ವೈರಸ್ ಎರಡನೇ ಅಲೆ ಎದ್ದಿರುವ ಈ ಸಮಯದಲ್ಲಿ ಪತ್ರವೊಂದನ್ನು ಬರೆದು ಸಾಮಾಜಿಕ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ತಮಗೆ ಉಂಟಾದ ಕೊರೊನಾ ಭೀತಿಯ ಬಗ್ಗೆ ಹಾಗೂ ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರಿಗೆ ಸೋಂಕು ತಗುಲಲು ಎಲ್ಲರೂ ಕಾರಣರಾಗುತ್ತಿರುವುದೇ ದೊಡ್ಡ ತಪ್ಪು ಎಂದಿರುವ ಅವರು, ಕೊರೊನಾ ಸೋಂಕು ಹರಡದಂತೆ ತಡೆಯೋಣ ಎಂದು ಪತ್ರದ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.

ಪತ್ರದಲ್ಲಿನ ವಿವರ:  ”ಹಲೋ ಎಲ್ಲರಿಗೂ.. ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದಿದ್ದೇನೆ. ಇತ್ತೀಚೆಗಷ್ಟೇ ನಾನು ಮತ್ತೆ ಕೊರೊನಾತಂಕಕ್ಕೆ ಒಳಗಾಗಿದ್ದೆ. ಕೋವಿಡ್-19 ಪಾಸಿಟಿವ್ ದೃಢಪಟ್ಟ ಸ್ನೇಹಿತರೊಬ್ಬರ ಸಂಪರ್ಕದಲ್ಲಿದ್ದೆ. ವಿಷಯ ತಿಳಿದ ಕೂಡಲೆ ನಾನು ಐಸೊಲೇಟ್ ಆದೆ. ರೋಗ ಲಕ್ಷಣಗಳನ್ನು ಗಮನಿಸಿದೆ. (ಹೆಚ್ಚು ದಿನಗಳ ಕಾಲ ಐಸೊಲೇಟ್ ಆಗಿ. ಎಷ್ಟು ದಿನಗಳ ಕಾಲ ಐಸೊಲೇಟ್ ಆಗಬೇಕೆಂದು ವೈದ್ಯರ ಸಲಹೆ ಪಡೆಯಿರಿ. ಈ ಮಧ್ಯೆ ಕೊರೊನಾ ಬಗ್ಗೆ ಏನೂ ತಿಳಿಯದ ನನ್ನ ಕಂದಮ್ಮ ಹಾಗೂ ನನ್ನ ಪೋಷಕರ ಬಗ್ಗೆ ಯೋಚಿಸಿ ಮಾನಸಿಕವಾಗಿಯೂ ಕುಗ್ಗಿದ್ದೆ) ನನಗೆ ಯಾವುದೇ ರೋಗ ಲಕ್ಷಣಗಳು ಕಂಡುಬಾರದೇ ಇದ್ದರೂ ಕೊರೊನಾ ಪರೀಕ್ಷೆಗೆ ಒಳಗಾದೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡುಬಂದಿದೆ.

ನಾನು ಇದನ್ನು ಮಾಡಿದ್ಯಾಕೆ ಅಂದ್ರೆ ಕಳೆದ ಡಿಸೆಂಬರ್‌ನಲ್ಲಿ ನನಗೆ ಹಾಗೂ ನನ್ನ ತಂದೆ-ತಾಯಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಅದರಿಂದ ಚೇತರಿಸಿಕೊಳ್ಳುವುದು ನಮಗೆ ಬಹಳ ಕಷ್ಟವಾಯಿತು. ಅಪ್ಪ-ಅಮ್ಮ ಇದೀಗ ಲಸಿಕೆ ಹಾಕಿಸಿಕೊಂಡಿದ್ದಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೋವಿಡ್ ನಿಮ್ಮ ಕುಗ್ಗಿಸುತ್ತದೆ. ಎಲ್ಲರಿಗೂ ಕೋವಿಡ್ ಒಂದೇ ರೀತಿ ರಿಯಾಕ್ಟ್ ಮಾಡಲ್ಲ. ಕೆಲವರಿಗೆ ಮೈಲ್ಡ್ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಂಥವರು ಬೇಗ ಚೇತರಿಸಿಕೊಳ್ಳುತ್ತಾರೆ. ಕೆಲವರನ್ನು ಕೊರೊನಾ ತೀವ್ರವಾಗಿ ಬಾಧಿಸುವುದರಿಂದ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕು. ಕೊರೊನಾದಿಂದ ಸಂಪೂರ್ಣವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಅದು ಹರಡದಂತೆ ತಡೆಯಲು ಪ್ರಯತ್ನಿಸೋಣ ಎಂದು ಮನವಿ ಮಾಡಿದ್ದಾರೆ.

ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಜನರಿಗೆ ಸೋಂಕು ತಗುಲಲು ನಾವು ಕಾರಣರಾಗುತ್ತಿರುವುದೇ ದೊಡ್ಡ ತಪ್ಪು. ನಾವು ಮಾಸ್ಕ್ ಧರಿಸೋಣ. ಸ್ಯಾನಿಟೈಸ್ ಮಾಡೋಣ. ಸಾಮಾಜಿಕ ಅಂತರ ಕಾಪಾಡಿಕೊಳ್ಳೋಣ. ಆ ಮೂಲಕ ರೋಗ ಹರಡದಂತೆ ನಾವೆಲ್ಲ ಪ್ರಯತ್ನಪಡೋಣ. ಸುರಕ್ಷಿತವಾಗಿರಿ.. ಎಂದು ಪತ್ರದಲ್ಲಿ ಬರೆದಿದ್ದಾರೆ. ಮೇಘನಾ ರಾಜ್ ಅವರು ಸದ್ಯ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: