ಮನರಂಜನೆ

ಕ್ಯಾಪ್ಟನ್ ಕೂಲ್ ಬದುಕಿನ ಏರುಪೇರುಗಳನ್ನು ಅನಾವರಣಗೊಳಿಸುವ ‘ಎಂಎಸ್ ಧೋನಿ – ದ ಅನ್‍ಟೋಲ್ಡ್ ಸ್ಟೋರಿ’

ಭಾರತಕ್ಕೆ ಎರಡೆರಡು ವಿಶ್ವಕಪ್ ತಂದುಕೊಟ್ಟ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಸಿನಿಮಾ ಆಗುತ್ತದೆ ಎಂದಾಗ ಸಹಜವಾಗಿ ಎಲ್ಲರ ದೃಷ್ಟಿ ಅತ್ತ ನೆಟ್ಟಿತ್ತು. ಒಬ್ಬ ಸಾಮಾನ್ಯ ನೀರಿನ ಪಂಪ್‌ ರಿಪೇರಿ ಮಾಡುವವನ ಮಗ ಅಸಾಮಾನ್ಯನಾಗಿ ಬೆಳೆದು ಇಡೀ ವಿಶ್ವವೇ ತಿರುಗಿ ನೋಡುವಂಥಾ ಯಶಸ್ವೀ ನಾಯಕನಾದ ಧೋನಿ ಬಗ್ಗೆ ಏನೆಲ್ಲಾ ಹೊಸ ವಿಷಯಗಳಿರಬಹುದು ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಈ ನಿರೀಕ್ಷೆಗೆ ನಿರಾಸೆಯಾಗದಂತೆ ಧೋನಿ ಬದುಕಿನ ಹೋರಾಟ ಮತ್ತು ಯಶಸ್ವೀ ದಿನಗಳನ್ನು ಕಟ್ಟಿಕೊಟ್ಟಿದೆ ಈ ನಿಸಿಮಾ.

MS Dhoni Review rating report collection

‘ಎಂಎಸ್ ಧೋನಿ – ಆ್ಯನ್ ಅನ್‍ಟೋಲ್ಡ್ ಸ್ಟೋರಿ’ ಹೆಸರೇ ಹೇಳುವಂತೆ ಧೋನಿಯ ಬಗ್ಗೆ ಯಾರಿಗೂ ತಿಳಿಯದ ಒಂದಷ್ಟು ವಿಷಯಗಳನ್ನು ನಿರ್ದೇಶಕರು ಹೇಳಿದ್ದಾರೆ. ಧೋನಿಗೆ ಮದುವೆಗೂ ಮುಂಚೆ ಇದ್ದ ಗರ್ಲ್‌ಫ್ರೆಂಡ್, ಯಾರಾಕೆ? ಎಲ್ಲಿಯವಳು? ಎಂಬುದಕ್ಕೆ ಉತ್ತರ ಈ ಸಿನಿಮಾದಲ್ಲಿದೆ. ರಾಂಚಿಯ ಪಾನ್ ಸಿಂಗ್ ಧೋನಿ ಎಂಬ ಸಾಮಾನ್ಯ ಮೆಕ್ಯಾನಿಕ್ ಮಗನಾದ ಮಹೇಂದ್ರ ಸಿಂಗ್ ಧೋನಿಗೆ ಪಾಠಕ್ಕಿಂತ ಆಟದಲ್ಲೇ ಆಸಕ್ತಿ. ಫುಟ್‌ಬಾಲ್ ಆಟಗಾರನಾಗಿದ್ದ ಧೋನಿಗೆ ಆಕಸ್ಮಿಕವೆನ್ನುವಂತೆ ಒಲಿಯುವ ಕ್ರಿಕೆಟ್ ಆಟದಲ್ಲಿ ಶ್ರದ್ಧೆ ಇರಿಸಿ ಯಶಸ್ವಿ ಆಟಗಾರನಾಗುತ್ತಾನೆ. ಇವನ ಆಟ ನೋಡಿದ ಸಾಕಷ್ಟು ಮಂದಿ ಇವನಿಗೆ ಅಭಿಮಾನಿಗಳಾಗುತ್ತಾರೆ. ಅವರೆಲ್ಲರೂ ಆತ್ಮೀಯ ಗೆಳೆಯರಾಗುತ್ತಾರೆ.  ಆದರೆ ರೈಲ್ವೇಯಲ್ಲಿ ಕೆಲಸ ಸಿಕ್ಕಾಗ ಧೋನಿಯ ಕ್ರಿಕೆಟ್ ಜರ್ನಿಗೆ ಸ್ವಲ್ಪ ತಡೆ ಬಿದ್ದಂತಾಗುತ್ತದೆ. ಕ್ರಿಕೆಟ್‌ಗಾಗಿ ಕೆಲಸ ಬಿಡುವ ಧೋನಿ, ಮುಂದೆ ಭಾರತೀಯ ಕ್ರಿಕೆಟ್ ತಂಡ ಹೇಗೆ ಸೇರುತ್ತಾರೆ ಎಂಬುದೇ ಸಿನಿಮಾದ ಕಥೆ.

ಸಾಮಾನ್ಯ ಹುಡಗ ಧೋನಿ, ಪ್ರೇಮಭಗ್ನ ಧೋನಿ – ಹೀಗೆ ಸಾಕಷ್ಟು ಮುಖಗಳು ಸಿನಿಮಾದಲ್ಲಿ ಅನಾವರಣಗೊಂಡಿದೆ. ಧೋನಿಯ ಕ್ರಿಕೆಟ್ ಜೀವನಕ್ಕೆ ಸಾಕ್ಷಿಯಾದ ಮತ್ತು ಸಹಾಯ ಮಾಡಿದ ಎಲ್ಲ ಗೆಳೆಯರನ್ನು ಮತ್ತು ಶಾಲಾ ದಿನದ ಕ್ರಿಕೆಟ್ ಗುರುಗಳನ್ನು ನಿರ್ದೇಶಕರು ಸಿನಿಮಾದಲ್ಲಿ ಸಮರ್ಥವಾಗಿ ತೋರಿಸಿದ್ದಾರೆ. ಇದರ ಮಧ್ಯೆ ವಿಮಾನದಲ್ಲಿ ಸಿಗುವ ಗೆಳತಿ, ಬಂದಷ್ಟೇ ವೇಗದಲ್ಲಿ ಕಣ್ಮರೆಯಾಗುತ್ತಾಳೆ. ಮಹೇಂದ್ರ ಸಿಂಗ್ ಧೋನಿಯ ಕ್ರಿಕೆಟ್‌ ಮಹತ್ವಕಾಂಕ್ಷೆಗೆ ಅಕ್ಕ ಮತ್ತು ಗೆಳತಿ ಸ್ಫೂರ್ತಿಯಾಗುವ ಸನ್ನಿವೇಶಗಳನ್ನು ಸುಂದರವಾಗಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಮೈನಸ್ ಪಾಯಿಂಟ್ ಎಂದರೆ ಸಿನಿಮಾದ ಉದ್ದ. ಸುಮಾರು ಮೂರು ಗಂಟೆ ಹತ್ತು ನಿಮಿಷ ಇರುವ ಸಿನಿಮಾದಲ್ಲಿ ಚಿತ್ರಕಥೆ ಚೆನ್ನಾಗಿರುವುದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.

ಧೋನಿಯಾಗಿ ಸುಶಾಂತ್ ರಜಪೂತ್ ಅವರದ್ದು ಅದ್ಭುತ ಅಭಿನಯ. ಧೋನಿಯ ಸಹೋದರಿ ಪಾತ್ರದಲ್ಲಿ ನಟಿಸಿರುವ ಭೂಮಿಕಾ ಚಾವ್ಲಾ ಅವರದ್ದು ಸರಳ ಸುಂದರ ಅಭಿನಯ. ತಂದೆಯಾಗಿ ಅನುಪಮ್ ಖೇರ್ ಭಾವನಾತ್ಮಕವಾಗಿ ಜೀವತುಂಬಿದ್ದಾರೆ. ಹಾಡುಗಳು ಸಿನಿಮಾ ಕಥೆಗೆ ಪೂರಕವಾಗಿದೆ. ಸಿನಿಮಾಟೋಗ್ರಫಿ ಕಥೆಗೆ ಎಷ್ಟು ಬೇಕೋ ಅಷ್ಟಿದೆ. ಸಾಧಿಸುತ್ತೇನೆ ಎಂಬ ಛಲವೊಂದಿದ್ದರೆ ಸಾಕು ಏನು ಬೇಕಾದರೂ ಸಾಧಿಸತ್ತೇನೆ ಎಂಬುದಕ್ಕೆ ಮಹೇಂದ್ರಸಿಂಗ್ ಧೋನಿಯವರ ನಿಜ ಜೀವನದ ಕಥೆಯೇ ಸಾಕ್ಷಿ.

Leave a Reply

comments

Related Articles

error: