ಮೈಸೂರು

ವೀಕೆಂಡ್ ಕರ್ಫ್ಯೂ ಗೆ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ : ಮೈಸೂರು ಅಕ್ಷರಶಃ ಸ್ತಬ್ಧ; ನಗರದ ಪ್ರದಕ್ಷಿಣೆ ನಡೆಸಿದ ಡಿಸಿಪಿ ಡಾ.ಪ್ರಕಾಶ್ ಗೌಡ ತಂಡ

ಮೈಸೂರು,ಏ.24:- ಕೋವಿಡ್‌ ನಿಯಂತ್ರಣಕ್ಕೆ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದು, ಇಂದು ಮೈಸೂರು ಅಕ್ಷರಶಃ ಸ್ತಬ್ಧವಾಗಿದೆ.

ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 9ಗಂಟೆಯಿಂದಲೇ ಕರ್ಫ್ಯೂ ಜಾರಿಗೊಂಡಿದ್ದು, ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ಇಂದು ಬೆಳಿಗ್ಗೆ 6ಗಂಟೆಯಿಂದ ನಗರದಲ್ಲಿ  10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.  ಜನರು ಹಾಗೂ ವಾಹನಗಳ ಓಡಾಟ ಕ್ಷೀಣಿಸಿರುವುದು ಕಂಡುಬಂತು. 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿತ್ತು. ಬಳಿಕ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ಕಾರ್ಯಕ್ಕೆ ಪೊಲೀಸರು ಮುಂದಾದರು. ಸಣ್ಣಪುಟ್ಟ ಹೋಟೆಲ್ ಗಳಲ್ಲಿಯೂ ಬೆಳಿಗ್ಗೆ 10ಗಂಟೆಯವರೆಗೆ ಪಾರ್ಸಲ್ ಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.  ಸದಾ ವಾಹನಗಳ ಸಂಚಾರದಿಂದ ಗಿಜಿಗುಡುತ್ತಿದ್ದ ಮೈಸೂರಿನಲ್ಲಿ ಬೆರಳೆಣಿಕೆ ವಾಹನಗಳಷ್ಟೇ ರಸ್ತೆಗಿಳಿದಿದ್ದವು.

ಮೈಸೂರಿನ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ನೀರವ ಮೌನ ಆವರಿಸಿತ್ತು. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕರಸ್ತೆ ಸೇರಿದಂತೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 10 ಗಂಟೆ ನಂತರ ಅಗತ್ಯ ವಸ್ತುಗಳ ಮಳಿಗೆಗಳಿಗೂ ಬೀಗ ಜಡಿಯಲಾಗಿತ್ತು.

ಪ್ರಮುಖ ವೃತ್ತಗಳು, ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾವಲು ಕಾಯುತ್ತಿದ್ದರು.  ಅಲ್ಲೊಂದು ಇಲ್ಲೊಂದು ದ್ವಿಚಕ್ರವಾಹನ, ರಿಕ್ಷಾ ಸಂಚಾರ ಬಿಟ್ಟರೆ ಖಾಸಗಿ ವಾಹನಗಳಿಗೆ ಸಂಪೂರ್ಣ ಬ್ರೇಕ್ ಬಿದ್ದಿತ್ತು. ನಗರದಲ್ಲಿ ಬಸ್ ಗಳೂ ಸಂಚರಿಸಿರಲಿಲ್ಲ. ಮುಂಗಡ ಟಿಕೇಟ್ ಕಾಯ್ದಿರಿಸಿದ್ದ ದೂರದ ಊರುಗಳಿಗೆ ಪ್ರಯಾಣಿಸುವ ಬಸ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಮೊದಲೇ ವೀಕೆಂಡ್ ಕರ್ಫ್ಯೂ ಇದೆ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ತಾವೆಲ್ಲಿ ಮಧ್ಯ ಸಿಲುಕಿಕೊಂಡು ಬಿಡುತ್ತೆವೆಯೋ ಎಂದು ಹಲವರು ಪ್ರಯಾಣಿಕರು  ಪ್ರಯಾಣಕ್ಕೆ ಹಿಂದೇಟು ಹಾಕಿದ್ದು ಕಂಡು ಬಂತು. ಮೈಸೂರು ನಗರದ ಸುತ್ತಲೂ ಖಾಕಿಯ ಸರ್ಪಗಾವಲು ಕಂಡು ಬಂತು.

ಅವಧಿ ಮುಗಿಯುತ್ತಲೇ ಅಂದರೆ ಬೆಳಿಗ್ಗೆ 10ಗಂಟೆಯಾಗುತ್ತಲೇ  ತರಕಾರಿ, ಹಣ್ಣು,  ದಿನಸಿ ವ್ಯಾಪಾರ ವಹಿವಾಟು ಅಂತ್ಯವಾಗಿದ್ದು,  ಖಾಕಿ ಪಡೆ ಕಾರ್ಯಾಚರಣೆಗಿಳಿದಿತ್ತು. ಎಲ್ಲ ವ್ಯವಹಾರಗಳನ್ನು ನಿರ್ಬಂಧಿಸಲಾಗಿದ್ದು, ಮುಂಜಾನೆ ವ್ಯಾಪಾರ ನಡೆಸಿ ವರ್ತಕರು ಮಳಿಗೆಗೆ ಶೇಟರ್ ಎಳೆದರು. ದೇವರಾಜ ಮಾರುಕಟ್ಟೆ ಸೇರಿದಂತೆ ಎಲ್ಲಕಡೆಯೂ ಸ್ತಬ್ಧಗೊಂಡಿದ್ದು, ಅಂಗಡಿ ಮುಚ್ಚಿ ಮನೆಗಳಿಗೆ ತೆರಳಿದರು.

ಮೊದಲ ದಿನದ ವೀಕೆಂಡ್ ಕರ್ಫ್ಯೂ ಈಗಾಗಲೇ ಪ್ರಾರಂಭವಾಗಿದ್ದು, ಗಂಟುಮೂಟೆ ಸಮೇತ ತಮ್ಮ ನಿವಾಸಗಳತ್ತ  ವ್ಯಾಪಾರಸ್ಥರು ತೆರಳುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ನಗರ ಪ್ರದಕ್ಷಿಣೆ ಹಾಕಿ ಡಿಸಿಪಿ ಡಾ.ಎ.ಎಎನ್. ಪ್ರಕಾಶ್ ಗೌಡ ಪರಿಶೀಲಿಸುತ್ತಿದ್ದಾರೆ. ಮೈಸೂರಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ವ್ಯವಸ್ಥೆ ವೀಕ್ಷಣೆ ನಡೆಸಿದರು. ಅನಗತ್ಯವಾಗಿ ಓಡಾಡುವವರ ಮೇಲೆ ಕಣ್ಣಿಡಲು ಸಿಬ್ಬಂದಿಗೆ ಸೂಚನೆ ನೀಡಿದರು ಬೆಳಿಗ್ಗೆ 10ಗಂಟೆ ವರಗೆ ಕೆಲವು ತುರ್ತು ಅವಶ್ಯಕತೆಗೆ ಅವಕಾಶ ಮಾಡಿಕೊಡಲಾಗಿತ್ತು. ನಿನ್ನೆ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಅಗತ್ಯಕ್ಕೂ ಹೆಚ್ಚು ಮಂದಿ ಸೇರಿದ್ದರಿಂದ ಪ್ರಕರಣ ದಾಖಲಿಸಿದ್ದೇವೆ.ಅಗತ್ಯ ವಸ್ತು ಖರೀದಿಗೆ 10ಗಂಟೆಯ ವರಗೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಅದನ್ನು ಸಹ ನಿಲ್ಲಿಸಲಾಗಿದೆ ಎಂದು ವ್ಯವಸ್ಥೆ ವೀಕ್ಷಣೆ ಬಳಿಕ ಡಿಸಿಪಿ ಡಾ.ಎ.ಎನ್.ಪ್ರಕಾಶ್ ಗೌಡ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: