ದೇಶಪ್ರಮುಖ ಸುದ್ದಿ

ಕೊರೊನಾ ವೈರಸ್ ನ 2ನೇ ಅಲೆ ಮಕ್ಕಳಿಗೂ ಅಪಾಯ: ವೈದ್ಯರ ಎಚ್ಚರಿಕೆ

ಚೆನ್ನೈ,ಏ.27-ಕೊರೊನಾ ಸೋಂಕಿನ ಎರಡನೇ ಅಲೆ ಹಿರಿಯರು, ವಯಸ್ಕರು ಮಾತ್ರವಲ್ಲದೇ ಮಕ್ಕಳಿಗೂ ಅತ್ಯಂತ ಅಪಾಯ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸೋಂಕಿಗೆ ತುತ್ತಾದ ಸಾಕಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ವೈದ್ಯರು ಗಮನಿಸಿದ್ದಾರೆ. ಇಂತಹ ಲಕ್ಷಣಗಳನ್ನು ಈ ಹಿಂದೆ ಅಂದರೆ ಮೊದಲ ಅಲೆಯಲ್ಲಿ ನೋಡಿರಲಿಲ್ಲ. ಆದರೆ 2ನೇ ಅಲೆ ವೇಳೆ ಇಂತಹ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಸಾಕಷ್ಚು ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಎರಡು ವರ್ಷದ ಮಕ್ಕಳನ್ನೂ ಸಹ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗಳಿಗೆ ಕರೆತರಲಾಗುತ್ತಿದೆ.

ಏಪ್ರಿಲ್ 23 ರಂದು, ಚೆನ್ನೈನ ಎಗ್ಮೋರ್ ನ ಸರ್ಕಾರಿ ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ಕೋವಿಡ್ ನ್ಯುಮೋನಿಯಾದಿಂದ 19 ದಿನಗಳ ಹೆಣ್ಣುಮಗು ಮೃತಪಟ್ಟಿತ್ತು. ಮಕ್ಕಳಿಗೆ ಸಂಬಂಧಿಸಿದಂತೆ ಇದು ಬಹುಶಃ ಮೊದಲ ಕೋವಿಡ್-19 ಸಾವಾಗಿರಬಹುದು.

ಆರಂಭದಲ್ಲಿ ಮಗುವನ್ನು ಬೇರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಇಲ್ಲಿಗೆ ಕರೆತರಲಾಗಿತ್ತು. ಮಗುವಿನ ಪೋಷಕರು ಕೋವಿಡ್‌ನ ಲಕ್ಷಣಗಳನ್ನು ಹೊಂದಿದ್ದರು. ಆದರೆ ಅವರಿಗೆ ಈ ಸೋಂಕಿದೆ ಎಂದು ತಿಳಿದಿರಲಿಲ್ಲ. ಕೋವಿಡ್ ನ್ಯುಮೋನಿಯಾದಿಂದ ಮಗು ಸತ್ತುಹೋಯಿತು. ಕೋವಿಡ್ ನ್ಯುಮೋನಿಯಾಕ್ಕೆ ತುತ್ತಾಗುವ ಮಕ್ಕಳಲ್ಲಿ ಇದು ಬಹುಶಃ ತಮಿಳುನಾಡಿನ ಮೊದಲ ಸಾವು ಪ್ರಕರಣವಾಗಿದೆ. ಕಳೆದ ವರ್ಷ ನಾವು ಇಂತಹ ಶ್ವಾಸಕೋಶದ ಸೋಂಕನ್ನು ನೋಡಿರಲಿಲ್ಲ. ಇದು ನಮ್ಮ ಮೊದಲ ಪ್ರಕರಣವೂ ಹೌದು ಎಂದು ಸಂಸ್ಥೆಯ ನಿರ್ದೇಶಕ ಡಾ.ಎಸ್.ಎಳಿಲರಸಿ ಹೇಳಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: