ದೇಶಪ್ರಮುಖ ಸುದ್ದಿ

ಐರ್ಲೆಂಡ್ ನಿಂದ ಭಾರತಕ್ಕೆ 700 ಆಕ್ಸಿಜನ್ ಟ್ಯಾಂಕರ್, ಇತರೆ ವೈದ್ಯಕೀಯ ಸಾಮಗ್ರಿ

ನವದೆಹಲಿ,ಏ.27- ಕೊರೊನಾ ಬಿಕ್ಕಟ್ಟಿನಲ್ಲಿರುವ ಭಾರತಕ್ಕೆ ಐರ್ಲೆಂಡ್ ಸಹಾಯಹಸ್ತ ಚಾಚಿದೆ. 700 ಆಮ್ಲಜನಕ ಟ್ಯಾಂಕರ್‌ಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ದೇಶಕ್ಕೆ ಕಳುಹಿಸುವುದಾಗಿ ಘೋಷಿಸಿದೆ.

ಬುಧವಾರ ಬೆಳಿಗ್ಗೆ ವೇಳೆಗೆ ಆಮ್ಲಜನಕ ಸಾಂದ್ರಕಗಳು ಭಾರತವನ್ನು ತಲುಪುವ ನಿರೀಕ್ಷೆಯಿದೆ ಎಂದು ಇಲ್ಲಿನ ಐರಿಶ್ ರಾಯಭಾರ ಕಚೇರಿ ತಿಳಿಸಿದೆ.

‘ಕೋವಿಡ್ ರೋಗಿಗಳಿಗೆ ಸಮಯೋಚಿತ ನೆರವು ನೀಡುವಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸಹಾಯ ಮಾಡಲು ಐರ್ಲೆಂಡ್ 700 ಆಮ್ಲಜನಕ ಟ್ಯಾಂಕರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿದೆ. ಬುಧವಾರ ಮುಂಜಾನೆ ಅವುಗಳು ಭಾರತವನ್ನು ತಲುಪುವ ನಿರೀಕ್ಷೆ ಇದೆ” ಎಂದು ಅದು ತಿಳಿಸಿದೆ.

ಐರ್ಲೆಂಡ್ ದೇಶವು ಭಾರತ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಹೆಚ್ಚಿನ ನೆರವನ್ನು ನೀಡಲು ಬಯಸುತ್ತದೆ ಎಂದು ಐರಿಶ್ ರಾಯಭಾರಿ ಬ್ರೆಂಡನ್ ವಾರ್ಡ್ ಹೇಳಿದ್ದಾರೆ.

‘ಅಧಿಕ ಪ್ರಮಾಣದ ಭಾರತೀಯ ಸಮುದಾಯ ಇರುವ ಐರ್ಲೆಂಡ್‌ ದೇಶವು ಭಾರತದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ. ನಮ್ಮ ಆರೋಗ್ಯ ವ್ಯವಸ್ಥೆಗೆ ಭಾರತೀಯ ವೈದ್ಯಕೀಯ ವೃತ್ತಿಪರರು ಬಹಳ ಮುಖ್ಯ’ ಎಂದು ಅವರು ಹೇಳಿದರು.

‘ಆಮ್ಲಜನಕವನ್ನು ಭಾರತಕ್ಕೆ ನೀಡುತ್ತಿರುವುದು ನಮಗೆ ಸಂತೋಷದ ವಿಷಯವಾಗಿದೆ. ನಾವು ಭಾರತ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ವೆಂಟಿಲೇಟರ್‌ಗಳು ಮತ್ತು ಇತರ ಸಲಕರಣೆಗಳಂತಹ ಹೆಚ್ಚಿನ ಸಹಾಯವನ್ನು ನೀಡುವತ್ತ ಗಮನಹರಿಸುತ್ತಿದ್ದೇವೆ’ ಎಂದು ರಾಯಭಾರಿ ಹೇಳಿದರು.

ಭಾರತವು ವಿನಾಶಕಾರಿ ಕೊರೊನಾ ಎರಡನೆ ಅಲೆಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದೆ. ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು, ವೈದ್ಯಕೀಯ ಆಮ್ಲಜನಕ ಮತ್ತು ಇತರ ಸರಬರಾಜುಗಳ ತೀವ್ರ ಕೊರತೆ ಉಂಟಾಗಿದೆ.

ಹೀಗಾಗಿ ಅಮೆರಿಕ, ಜರ್ಮನಿ, ಫ್ರಾನ್ಸ್, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪುರ್, ಇಸ್ರೇಲ್ ಮತ್ತು ಇತರ ಹಲವಾರು ದೇಶಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ಯುರೋಪಿಯನ್ ಒಕ್ಕೂಟ ಈಗಾಗಲೇ ಕೊರೊನಾ ಪರಿಸ್ಥಿತಿಯನ್ನು ಎದುರಿಸಲು ಭಾರತಕ್ಕೆ ತುರ್ತು ವೈದ್ಯಕೀಯ ನೆರವು ಘೋಷಿಸಿವೆ. ಇದೀಗ ಐರ್ಲೆಂಡ್ ಕೂಡ ಭಾರತಕ್ಕೆ ನೆರವು ನೀಡಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: