ಮೈಸೂರು

ಜಿಲ್ಲಾಡಳಿತ ಸತ್ತುಹೋಗಿದೆಯಾ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? : ಸರ್ಕಾರದ ವಿರುದ್ಧ ಶಾಸಕ ಸಾ.ರಾ.ಮಹೇಶ್ ಕಿಡಿ

ಮೈಸೂರು,ಏ.28:-  ಮೈಸೂರಲ್ಲಿ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ  ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಜನ ನಿಮಗೆ ಶಾಪ ಹಾಕುತ್ತಿದ್ದಾರೆ. ನಿಮಗೆ ವೆಂಟಿಲೇಟರ್ ಕೊಡಲು ಸಾಧ್ಯವಾಗ್ತಿಲ್ಲ. ನಿಮಗೆ ಎಲ್ಲ ರೀತಿ ಸಹಕಾರ ಕೊಟ್ಟಿದ್ದೇವೆ. ಆದರೂ ಕೂಡ ಸರಿಯಾದ ವ್ಯವಸ್ಥೆ ಮಾಡಿಲ್ಲ ಅಂದ್ರೆ ಹೇಗೆ.? ಮೈಸೂರಿಗೆ ಇವತ್ತು ಎಂತಹ ಸ್ಥಿತಿ ತಂದಿದ್ದೀರಾ ಗೊತ್ತಾ? ಮೈಸೂರು ಜಿಲ್ಲೆಯ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಾ? ಸಾಕು ನಿಮ್ಮ ಈ ಮೂರ್ಖತನದ ಆಟ. ವೆಂಟಿಲೇಟರ್ ಇಲ್ಲದೆ ಜನರು ಸಾಯುತ್ತಿದ್ದಾರೆ. ಮಾಜಿ ಜಿ‌ಪಂ ಅಧ್ಯಕ್ಷರಿಗೆ ರಿಕ್ವೆಸ್ಟ್ ಮಾಡಿ ರೆಮಿಡಿಸಿವರ್ ಔಷಧಿ ಕೊಡಿಸಿದ್ದೇವೆ. ಅಷ್ಟರಮಟ್ಟಿಗೆ ಸಮಸ್ಯೆ ತಲೆದೋರಿದೆ ಅಂದ್ರೆ ಸಾಮಾನ್ಯ ಜನರ ಕಥೆ ಏನು? ಮಂಚ ಹಾಕಿ ಬೆಡ್ ಹಾಕಿದ್ರು ಆಸ್ಪತ್ರೆ ಆಗುತ್ತಾ? ಅದಕ್ಕೆ ಡಾಕ್ಟರ್ ಬೇಡ್ವಾ? ನರ್ಸ್ ಬೇಡ್ವಾ? ಔಷಧ ಬೇಡ್ವಾ? ಮೊದಲು ಜನರನ್ನು ಉಳಿಸುವ ಕೆಲಸ ಮಾಡಿ. ಇನ್ನಾದರೂ ಸರಿಯಾದ ವ್ಯವಸ್ಥೆ ಮಾಡಿ ಕ್ರಮ ಕೈಗೊಳ್ಳಿ ಎಂದು ಸರ್ಕಾರ ಹಾಗೂ ಸಚಿವ ಎಸ್ ಟಿ ಸೋಮಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆ ಹೆಣ್ಣು ಮಗಳು ಸತ್ತು ಹೋಗಿದ್ದಾಳೆ. ಆಕ್ಸಿಜನ್ ಇಲ್ಲದೆ ಅವರು ಸಾವನ್ನಪ್ಪಿದ್ದಾರೆ. ಎಷ್ಟು ಜೀವಗಳ ಜೊತೆ ಚೆಲ್ಲಾಟ ಆಡುತ್ತೀರಾ ? ಇವತ್ತು ಶ್ರೀಮಂತರು, ದುಡ್ಡಿರುವವರು ತಕ್ಷಣ ವೆಂಟಿಲೇಟರ್ ತಕ್ಷಣ ಚಿಕಿತ್ಸೆ ಸಿಗುತ್ತಿದೆ. ಅವರು ಬಹುಬೇಗ ಗುಣಮುಖರಾಗುತ್ತಿದ್ದಾರೆ. ಸಾಯುತ್ತಿರುವವರು ರೈತರು, ಬಡವರು. ಹಣ ನೀಡಲು ಆಗದವರು ಇಂದು ಸಾಯುತ್ತಿದ್ದಾರೆ. ದಾಕ್ಷಾಯಿಣಿ ಶವ ಇಟ್ಟು ಪ್ರತಿಭಟನೆ ಮಾಡಬಹುದಿತ್ತು. ನಮಗೆ ರಾಜಕೀಯ ಮಾಡುವುದು ಬೇಕಾಗಿಲ್ಲ. ಜನ ಕಷ್ಟಪಡುತ್ತಿದ್ದಾರೆ ನಿನ್ನೆ ಗ್ರಾ.ಪ ಸದಸ್ಯ ಮೃತಪಟ್ಟಿದ್ದಾನೆ. ಮೀಟಿಂಗ್ ಮಾಡಿದರೆ ಆಗುವುದಿಲ್ಲ. ಜಿಲ್ಲಾಡಳಿತ, ಸರ್ಕಾರ, ಡಿಎಚ್ಓ‌ ಏನು ಮಾಡುತ್ತಿದ್ದಾರೆ? ದಯವಿಟ್ಟು ಜನರ ಜೀವದ ಜೊತೆ ಚೆಲ್ಲಾಟ ಆಡಬೇಡಿ. ಜನರನ್ನು ಕೆರಳಿಸುವ ಕೆಲಸ ಮಾಡಬೇಡಿ. ಪೋಸ್ಟಿಂಗ್‌ಗಾಗಿ ಮೈಸೂರೇ ಬೇಕು ಎಂದವರು ಏನು ಮಾಡುತ್ತಿದ್ದಾರೆ. ಗ್ಯಾರೇಜ್ ಅಲ್ಲಿ ಟೈರ್ ಹಾಕಿ ಪಬ್ಲಿಸಿಟಿ ಪಡೆದ ರೀತಿ ಅಲ್ಲ. ಜನರ ಸೇವೆ ಮಾಡುವುದು ಈ ರೀತಿ ಅಲ್ಲ ಎಂದು  ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ   ಗುಡುಗಿದರು. ಸಾವನ್ನಪ್ಪಿದ 36 ವರ್ಷದ ಮಹಿಳೆ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಈಗಲಾದರೂ ಸತ್ಯ ಒಪ್ಪಿಕೊಳ್ಳಿ ಕ್ಯಾಬಿನೆಟ್‌ ನಲ್ಲಿ ನಿರ್ಣಯ ಕೈಗೊಳ್ಳಿ. ಮೈಸೂರಿಗೆ ಈ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಟೆಸ್ಟ್ ಮಾಡಿದವರ ಸಂಖ್ಯೆ ಸಾವಿರ ಎರಡು ಸಾವಿರ ಇದೆ. ಟೆಸ್ಟ್ ಮಾಡದೇ ಇದ್ದವರು ಅದೆಷ್ಟು ಜನ ಇದ್ದಾರೋ ಎಂದು ಕಿಡಿಕಾರಿದರು.

ಓರ್ವ  ಕೊರೊನಾ ಸೋಂಕಿತರ ಉದಾಹರಣೆ ನೀಡಿದ ಶಾಸಕ ಸಾ ರಾ ಮಹೇಶ್ ಅವರು 36 ವರ್ಷದ ದಾಕ್ಷಿಯಿಣಿ ಎಂಬ ಮಹಿಳೆಗೆ ಕೊರೋನಾ ಆಗಿತ್ತು. ನಾನೇ ಹೇಳಿದರೂ ಸೋಂಕಿತರಿಗೆ ವೆಂಟಿಲೇಟರ್ ವ್ಯವಸ್ಥೆ ಆಗಿಲ್ಲ. ಡಿಎಚ್‌ಓಗೆ 5 ರಿಂದ 6 ಬಾರಿ ಕರೆ ಮಾಡಿದೆ. 36 ವರ್ಷದ ಹೆಣ್ಣು ಮಗಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯಾಕೆ ಜನರ ಬಳಿ ಸುಳ್ಳು ಹೇಳುತ್ತಿದ್ದೀರಾ? ಜನರನ್ನು ಏನು ಮಾಡಬೇಕು ಎಂದು ಕೊಂಡಿದ್ದೀರಾ? ಜಿಲ್ಲಾಡಳಿತ ಸತ್ತು ಹೋಗಿದೆಯಾ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ? 1 ಲಕ್ಷ ಕೊಡುತ್ತೀನಿ ಅಂದರೂ ವೈದ್ಯರು ಸಿಗುತ್ತಿಲ್ಲ. ಈಗಲೂ ಸಾಕಷ್ಟು ಜನ ವೆಂಟಿಲೇಟರ್‌ಗೆ ಕಾದು ಕುಳಿತಿದ್ದಾರೆ ಎಂದು ಸರ್ಕಾರದ ವಿರುದ್ಧ ಮೈಸೂರಿನಲ್ಲಿ   ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: