ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಾರ್ವಜನಿಕರ ಭಯವನ್ನು ಕಡಿಮೆ ಮಾಡಲು ಅಧಿಕಾರಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ

ಮೈಸೂರು, ಏ.28:- ಕೋವಿಡ್ ಪಾಸಿಟಿವ್ ಬಂದ ತಕ್ಷಣ ಆಕ್ಸಿಜನೇಟೆಡ್ ಬೆಡ್ ಬೇಕು ಎಂಬ ನಿಲುವಿಗೆ ಸಾರ್ವಜನಿಕರು ಬರುತ್ತಾರೆ. ಎಲ್ಲರಿಗೂ ಆಕ್ಸಿಜನೇಟೆಡ್ ಹಾಸಿಗೆ ಅಗತ್ಯವಿಲ್ಲ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಬುಧವಾರ ಹುಣಸೂರಿನ‌ ನಗರ ಸಭೆ ಕಚೇರಿಯಲ್ಲಿ ಕೊವೀಡ್-19ಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಮತ್ತು ಸ್ಥಿತಿಗತಿಗಳ ಕುರಿತು ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಾರ್ವಜನಿಕರ ಭಯವನ್ನು ಕಡಿಮೆ ಮಾಡಲು ಕೋವಿಡ್‌ನಿಂದ ಎಷ್ಟು ಮಂದಿ ಪ್ರತಿದಿನ ಗುಣಮುಖರಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದರ ಜೊತೆಗೆ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ತಿಳಿಸಿ ಜನರ ಭಯವನ್ನು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಬೆಂಗಳೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಸೇರಿದಂತೆ ಇತರ ಅಕ್ಕಪಕ್ಕದ ಜಿಲ್ಲೆಯ ಕೋವಿಡ್ ಸೋಂಕಿತರು ತುರ್ತು ಪರಿಸ್ಥಿತಿಯಲ್ಲಿ ಮೈಸೂರಿನ ಆಸ್ಪತ್ರೆಗಳಿಗೆ ಬರುವ ಕಾರಣ ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಭಯ ಉಂಟಾಗುವುದು ಸಾಮಾನ್ಯವಾಗಿದ್ದು, ಭಯವನ್ನು ದೂರ ಮಾಡುವ ನಿಟ್ಟಿನಲ್ಲಿ ತಹಶಿಲ್ದಾರರು ಸೇರಿದಂತೆ ಇತರೆ ಅಧಿಕಾರಿಗಳು, ಶಾಸಕರು ಮಾಧ್ಯಮದ ಮೂಲಕ ಜನರ ಭಯವನ್ನು ಕಡಿಮೆ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೆ.ಆರ್.ನಗರ ಬಿಟ್ಟರೆ ಹುಣಸೂರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್‌ ಮಾಡಿದೆ. ಸರ್ಕಾರವು ಮುಂದಿನ ದಿನಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಲು ಘೋಷಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ನೀಡುವುದರಿಂದ ಲಸಿಕೆ ತೆಗೆದುಕೊಳ್ಳಲು ಮುಗಿಬೀಳುವ ಅವಶ್ಯಕತೆ ಇರುವುದಿಲ್ಲ ಎಂದರು.

ಮೈಸೂರಿಗೆ 4 ಕೋಟಿ ಹಣ ಬಿಡುಗಡೆಯಾಗಿದ್ದು, ಹುಣಸೂರಿನಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದ್ದರೆ ಹೊಸದಾಗಿ ನೇಮಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಸರ್ಕಾರದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು

ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ಶೀಘ್ರವಾಗಿ 998 ರೆಮ್ಡಿಸಿವಿಆರ್ ಲಸಿಕೆಗಳು ಬರಲಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೇಖರಣೆಯಾಗಿದೆ. ಅಲ್ಲದೆ 100 ವೆಂಟಿಲೇಟರ್ ಹಾಗೂ 20 ಆಕ್ಸಿಜನ್ ಸಿಲಿಂಡರ್ ಗಳು ಶೀಘ್ರವಾಗಿ ಬರಲಿದ್ದು, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಬೆಡ್ ಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಹೆಚ್.ಪಿ‌.ಮಂಜುನಾಥ್, ವಿಧಾನ ಪರಿಷತ್ತಿನ ಸದಸ್ಯ ಅಡಗೂರು ಹೆಚ್. ವಿಶ್ವನಾಥ್, ಜಿಲ್ಲಾ ಪಂಚಾಯತಿಯ ಸಿಇಒ ಎ.ಎಂ.ಯೋಗೀಶ್ ಸೇರಿದಂತೆ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: