ಮೈಸೂರು

ಸಾಲಗಳ ಮರು ಪಾವತಿಯ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸಹಕಾರ ಸಚಿವರಿಗೆ ಜಿ.ಡಿ.ಹರೀಶ್ ಗೌಡ ಮನವಿ

ಮೈಸೂರು,ಏ.29:-  ಕೋವಿಡ್- 19 ರ ಕಾರಣದಿಂದ ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳು ಹಾಗೂ ಸ್ವ ಸಹಾಯ ಸಂಘಗಳ ಸಾಲಗಳ ಮರು ಪಾವತಿಯ ಅವಧಿಯನ್ನು ವಿಸ್ತರಿಸುವಂತೆ ಕೋರಿ   ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರಿಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಅವರು  ಬ್ಯಾಂಕಿನಿಂದ 2020-21 ನೇ ಸಾಲಿನಲ್ಲಿ 80,368 ಜನ ರೈತರಿಗೆ ರೂ.74916.36 ಲಕ್ಷಗಳ ಕೆ.ಸಿ.ಸಿ. ಸಾಲ, 1129 ಜನ ರೈತರಿಗೆ ರೂ.2810.20 ಲಕ್ಷಗಳ ಮಧ್ಯಮಾವಧಿ ಸಾಲ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಕಾಯಕ ಯೋಜನೆ ಯಡಿಯಲ್ಲಿ ಜೋಡಣೆ ಸಾಲ ನೀಡಿದ್ದು, ಈ ಸಾಲಗಳಿಗೆ ಸರ್ಕಾರದ ಬಡ್ಡಿ ಸಹಾಯಧನದ ಸೌಲಭ್ಯ ವಿರುತ್ತದೆ. ಆದರೆ ಈಗ ಕೋವಿಡ್ 19 ರ ಸಾಂಕ್ರಾಮಿಕ ರೋಗದ ಕಾರಣ ಈಗಾಗಲೇ 15 ದಿನಗಳ ಕಾಲ ಕರ್ಫ್ಯೂ ಇದ್ದು, ಸಾಂಕ್ರಾಮಿಕ ರೋಗ ಇನ್ನೂ ಮುಂದುವರಿಯುವ ಸಾಧ್ಯತೆ ಇರುವುದರಿಂದ ರೈತರಿಗೆ ಹಾಗೂ ಸ್ವ ಸಹಾಯ ಗುಂಪುಗಳಿಗೆ ಸಾಲ ಮರುಪಾವತಿ ಕಷ್ಟಕರವಾಗಿರುತ್ತದೆ. ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸದೆ ಸಾಲ ಸುಸ್ತಿಯಾದರೆ ಸುಸ್ತಿ ಸಾಲಗಳಿಗೆ ಸರ್ಕಾರದಿಂದ ಬಡ್ಡಿ ಸಹಾಯಧನ ದೊರೆಯುವುದಿಲ್ಲ. ಈ ರೀತಿಯಾದಲ್ಲಿ ರೈತರು ಸಾಲ ಪಡೆದ ದಿನಾಂಕದಿಂದ ಪೂರ್ಣ ಬಡ್ಡಿಯೊಡನೆ ಸಾಲ ಮರುಪಾವತಿಸಬೇಕಾಗುತ್ತದೆ. ಇದು ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಈ ಹಿನ್ನೆಲೆಯಲ್ಲಿ   30.06.2021 ರ ವರೆಗೆ ವಾಯಿದೆ ಇರುವ ಕೆ.ಸಿ.ಸಿ, ಮಧ್ಯಮಾವಧಿ ಕೃಷಿ ಸಾಲಗಳ ಹಾಗೂ ಸ್ವ ಸಹಾಯ ಗುಂಪುಗಳ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 3 ತಿಂಗಳ ವರೆಗೆ ವಿಸ್ತರಿಸಿದಲ್ಲಿ, ಈಗಾಗಲೇ ಕೋವಿಡ್-19 ರ ಸಂಕಷ್ಟದಲ್ಲಿರುವ ರೈತ ಹಾಗೂ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕವಾಗಿ ಸಹಾಯ ವಾಗುವುದರಿಂದ ಮರುಪಾವತಿ ಅವಧಿಯನ್ನು ವಿಸ್ತರಿಸುವಂತೆ ಕೋರಿದರು.

ಈ ಸಂದರ್ಭ ಶಾಸಕರುಗಳಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: