ದೇಶಪ್ರಮುಖ ಸುದ್ದಿ

ಕೋವಿಡ್ ಸೋಂಕಿತರಿಗೆ ಉಚಿತ ಆಕ್ಸಿಜನ್ ಪೂರೈಸಲು ಮುಂದಾದ ನಟ ಸುನೀಲ್ ಶೆಟ್ಟಿ

ಮುಂಬೈ/ಬೆಂಗಳೂರು,ಏ.29-ಕೋವಿಡ್ ಸಂಕಷ್ಟದಲ್ಲಿ ಅನೇಕರು ನೆರವಿನ ಹಸ್ತ ಚಾಚುತ್ತಿದ್ದು, ಇದೀಗ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಉಚಿತವಾಗಿ ಆಕ್ಸಿಜನ್ ಪೂರೈಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಅದರಂತೆ ಈಗ ಬೆಂಗಳೂರು ಮತ್ತು ಮುಂಬೈನಲ್ಲಿ ಆಕ್ಸಿಜನ್‌ ಪೂರೈಕೆ ಕೆಲಸಗಳು ನಡೆಯುತ್ತಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾವೆಲ್ಲರೂ ಈಗ ಗಂಭೀರ ಪರಿಸ್ಥಿತಿಯ ಕಾಲಘಟ್ಟದಲ್ಲಿ ಇದ್ದೇವೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಅನೇಕರು ನಮ್ಮೊಂದಿಗೆ ಸಹಾಯಕ್ಕಾಗಿ ಕೈ ಜೋಡಿಸಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಫೀಡ್ ಮೈ ಸಿಟಿ ಮತ್ತು ಕೆವಿಎನ್ ಫೌಂಡೇಷನ್ ವತಿಯಿಂದ ಉಚಿತವಾಗಿ ಆಕ್ಸಿಜನ್ ಸಿಲಿಂಡರ್ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಮಿಷನ್ ಮಿಲಿಯನ್ ಏರ್ ಹೆಸರಿನಲ್ಲಿ ನಡೆಯುತ್ತಿರುವ ಕೆಲಸವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ನನ್ನ ಎಲ್ಲ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಇದು ನನ್ನ ಮನವಿ ಆಗಿದೆ. ನಿಮಗೆ ಸಹಾಯ ಬೇಕಾಗಿದ್ದಲ್ಲಿ ಅಥವಾ ನಿಮ್ಮ ವಲಯದಲ್ಲಿ ಯಾರಿಗಾದರೂ ಸಹಾಯ ಬೇಕಿದ್ದಲ್ಲಿ, ಸಹಾಯ ಮಾಡಲು ಯಾರಾದರೂ ಸಿದ್ಧವಿದ್ದಲ್ಲಿ ನನಗೆ ನೇರವಾಗಿ ಸಂದೇಶ ಕಳಿಸಿ. ನೀವು ಕೂಡ ಕೊಡುಗೆ ನೀಡಿ, ನಿಮಗೆ ಇಷ್ಟವಿದ್ದಲ್ಲಿ ಈ ಮಿಷನ್‌ನ ಭಾಗವಾಗಿ. ದಯವಿಟ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಪ್ರಸ್ತುತ ಬೆಂಗಳೂರು ಮತ್ತು ಮುಂಬೈನಲ್ಲಿ ಆಕ್ಸಿಜನ್‌ ಪೂರೈಕೆ ಕೆಲಸಗಳು ನಡೆಯುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್, ಎಂ.ಎನ್)

 

Leave a Reply

comments

Related Articles

error: