ಮೈಸೂರು

ಮೈಮುಲ್ ನಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ 7 ಆಯುರ್ವೇದಿಕ್ ಹಾಲುಗಳು

ಮೈಸೂರು,ಏ.29-ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿವಿಧ ಬಗೆಯ 7 ಆಯುರ್ವೇದಿಕ್ ಹಾಲುಗಳನ್ನು ಮೈಮುಲ್ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ಈ ಬಗ್ಗೆ ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರು ಇಂದು ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ತುಳಸಿ, ಅಶ್ವಗಂಧ, ಕಾಳುಮೆಣಸು, ಲವಂಗ, ಶುಂಠಿ, ಅರಿಶಿಣ (ಹಳದಿ ಹಾಲು), ಕಷಾಯ ಇನ್ನು ಮುಂದೆ ಸಿಗಲಿದೆ. 200 ಮಿ.ಲೀ ಬಾಟಲ್ ಗಳಲ್ಲಿ ಹಾಲು ಲಭ್ಯವಾಗಲಿದ್ದು, ಇದರ ಬೆಲೆ 20 ರೂ.ಗಳಾಗಿರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 2000 ಲೀ. ಹಾಲು ಲಭ್ಯವಿದ್ದು, ಗ್ರಾಹಕರ ಪ್ರತಿಕ್ರಿಯೆಗೆ ಹಾಗೂ ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಲಾಗುವುದು ಎಂದರು.

ತುಳಸಿ ಹಾಲು ಉತ್ಕೃಷ್ಟ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಸಕ್ಕರೆ ಅಂಶ, ಒತ್ತಡ ನಿಯಂತ್ರಿಸುವಲ್ಲಿ ಸಹಕಾರಿ. ಜ್ವರ, ನೆಗಡಿ ಮತ್ತು ಕೆಮ್ಮು ತಡೆಗಟ್ಟುತ್ತದೆ. ಸಾರಭೂತ ತೈಲಗಳು ಇರುವುದರಿಂದ ಚರ್ಮದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಮತ್ತು ಸೋಂಕು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಕಾಳು ಮೆಣಸಿನ ಹಾಲು ಉತ್ತಮ ಪೋಷಕಾಂಶಗಳನ್ನು ಹೊಂದಿದ್ದು, ರೋಗ ನಿರೋಧಕ ಶಕ್ತಿ ನೀಡುತ್ತದೆ. ಉತ್ತಮ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ವಿಟಮಿನ್ ಎ, ಸಿ, ಕೆ ಮತ್ತು ಫೋಲಿಕ್ ಆಮ್ಲ ಜೊತೆಗೆ ಪೊಟ್ಯಸಿಯಂ, ಮೇಗ್ನಿಶಿಯಂ ಅಂಶಗಳನ್ನು ಸಹ ಹೊಂದಿರುವುದರಿಂದ ಮನುಷ್ಯನ ಜೀಣಾಂಗಗಳ ಕಾರ್ಯವನ್ನು ಉತ್ತಮಪಡಿಸುತ್ತದೆ. ಜೊತೆಗೆ ಜೀವ ವಿರೋಧಿ ಶಕ್ತಿಗಳನ್ನು ತಡೆಗಟ್ಟುವ ಅಂಶಗಳನ್ನು ಹೊಂದಿರುವುದರಿಂದ ಅಬೂರ್ಧ ರೋಗ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶುಂಟಿ ಹಾಲು ಸಾಮಾನ್ಯ ರೋಗಗಳಾದ ನೆಗಡಿ, ಕೆಮ್ಮು ತಡೆಗಟ್ಟುತ್ತದೆ. ಉರಿಯೂತವನ್ನು ಕಡಿಮೆಮಾಡುತ್ತದೆ. ಬೆಳಗಿನ ವಾಕರಿಕೆ ನಿವಾರಿಸುವ ಶಕ್ತಿಯನ್ನು ಹೊಂದಿದೆ. ಹೀಗೆ ಪ್ರತಿಯೊಂದು ಹಾಲು ಒಂದೊಂದು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎಂ.ಪ್ರದೀಪ್, ಕೆ.ಎಸ್.ಜಗದೀಶ್ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: