ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಮೇ 13ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ ಕಾವ್ಯಾ ಗೌಡ

ಬೆಂಗಳೂರು,ಏ.29- ಇತ್ತೀಚೆಗಷ್ಟೇ ತಾವು ಮದುವೆಯಾಗಲಿರುವ ಹುಡುಗನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಟಿ ಕಾವ್ಯಾ ಗೌಡ ಅವರು ಇದೀಗ ಮದುವೆಯ ದಿನಾಂಕವನ್ನು ಬಹಿರಂಗೊಳಿಸಿದ್ದಾರೆ.

ಮೇ 13 ರಂದು ಕಾವ್ಯಾ ಗೌಡ ಅವರು ಬೆಂಗಳೂರಿನ ಉದ್ಯಮಿ ಸೋಮಶೇಖರ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಸರಳವಾಗಿ ಕೆಲವೇ ಮಂದಿಯ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ತಮ್ಮ ಮದುವೆ ಬಗ್ಗೆ ಮಾತನಾಡಿರುವ ಕಾವ್ಯಾ ಗೌಡ, ನನ್ನ ಪೋಷಕರು ನನಗಾಗಿ ಸೂಕ್ತ ವರನ ಹುಡುಕಾಟದಲ್ಲಿದ್ದರು. ಅದೇ ಪ್ರಕ್ರಿಯೆಯಲ್ಲಿ ಸೋಮಶೇಖರ್ ಸೂಕ್ತವೆನಿಸಿ ಅವರನ್ನು ಆರಿಸಿದ್ದಾರೆ. ನಾನು ಸೋಮಶೇಖರ್ ಅವರೊಟ್ಟಿಗೆ ಮಾತನಾಡಿದ ಬಳಿಕ ನನ್ನ ಪೋಷಕರ ಆಯ್ಕೆ ಬಗ್ಗೆ ಹೆಮ್ಮೆಯಾಯಿತು. ಸೋಮಶೇಖರ್ ಒಬ್ಬ ಅದ್ಭುತ ವ್ಯಕ್ತಿ ಎಂಬುದನ್ನು ಅರಿತುಕೊಂಡೆ. ಅವರೊಟ್ಟಿಗೆ ಜೀವನ ಆರಂಭಿಸಲು ಕಾತರಳಾಗಿದ್ದೇನೆ ಎಂದಿದ್ದಾರೆ.

ನಾನು ನನ್ನ ಕುಟುಂಬದ ಕಿರಿ ಮಗಳು, ಸೋಮಶೇಖರ್ ಸಹ ಅವರ ಮನೆಯಲ್ಲಿ ಕಿರಿಮಗ ಎರಡೂ ಕುಟುಂಬದವರು ನಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಚನೆಯಲ್ಲಿದ್ದರು. ಆದರೆ ಕೊರೊನಾ ಪರಿಸ್ಥಿತಿಯಿಂದ ಅದು ಸಾಧ್ಯವಾಗುತ್ತಿಲ್ಲ. ಕೊರೊನಾ ನಿಯಂತ್ರಣ ನಿಯಮಗಳ ಪ್ರಕಾರವೇ ಕಡಿಮೆ ಜನರ ಸಮ್ಮುಖದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.

ಮದುವೆ ನಂತರ ನಟಿಸುವುದಿಲ್ಲ ಎಂದಿರುವ ಕಾವ್ಯಾ ಗೌಡ, ನಾನು ‘ರಾಧಾ ರಮಣ’ ಧಾರಾವಾಹಿ ನಂತರ ಯಾವುದೇ ಹೊಸ ಧಾರಾವಾಹಿ, ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ವೈಯಕ್ತಿಕ ಬದುಕನ್ನು ಅನುಭವಿಸುವುದು, ಕುಟುಂಬದವರೊಟ್ಟಿಗೆ ಕಾಲಕಳೆಯುವುದು ನನ್ನ ಉದ್ದೇಶವಾಗಿತ್ತು. ನನ್ನ ಎಂಟು ವರ್ಷ ನಟನಾವೃತ್ತಿ ನನಗೆ ತೃಪ್ತಿ ನೀಡಿದೆ ಅಷ್ಟು ಸಾಕು ಎಂದು ತಿಳಿಸಿದ್ದಾರೆ.

ಕಾವ್ಯಾ ಗೌಡ ಅವರು, ರಾಧಾ-ರಮಣ, ಶುಭ ವಿವಾಹ, ಗಾಂಧಾರಿ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಕಾಸುರ ಹೆಸರಿನ ಸಿನಿಮಾದಲ್ಲಿಯೂ ನಟಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: