ಕರ್ನಾಟಕಪ್ರಮುಖ ಸುದ್ದಿಮೈಸೂರು

ಸರ್ಕಾರ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಬಡ ವರಿಗಾಗಿಯೇ ಜೀವಂತವಿದ್ದಾರೆ : ಸಚಿವ ಎಸ್ ಟಿ ಎಸ್

ಮೈಸೂರು, ಏ..29.:-ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜೀವಂತವಾಗಿರುವುದರಿಂದಲೇ ಕೋವಿಡ್-19 ಸಂಬಂಧ ಮೈಸೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಭೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಬಡವರಿಗಾಗಿ ಜೀವಂತವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಮೈಸೂರಿನ ಜನತೆಗೆ ಪ್ರಾಣ ನೀಡಲು ಕೂಡ ಸಿದ್ಧವಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲೆಯ 12 ವಿಧಾನ ಸಭಾ ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಕೊರೊನಾ ಸೋಂಕು ಸಂಬಂಧ ಸಭೆ ನಡೆಸಿದ್ದೇನೆ. ಈ ಸಭೆಯಲ್ಲಿ ಆಯಾ ಕ್ಷೇತ್ರದ ಶಾಸಕರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿ ಸಹಕಾರ ನೀಡಿದ್ದಾರೆ. ಅದರಂತೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲೂ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ ಸ್ಪಷ್ಟನೆ ನೀಡಿದರು.

ಮೈಸೂರು ಉಸ್ತುವಾರಿ ಸಚಿವರು ಬದುಕಿದ್ದಾರ ಎಂದು ಪ್ರಶ್ನಿಸಿರುವ ಕೆ.ಆರ್‌.ನಗರ ಕ್ಷೇತ್ರದ ಶಾಸಕ ಸಾ.ರಾ. ಮಹೇಶ್ ಅವರಿಗೆ ತಮ್ಮ ಕ್ಷೇತ್ರದ ಜನತೆ ಮೇಲೆ ಅಭಿಮಾನ ಹಾಗೂ ಕಾಳಜಿ ಇದ್ದಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಭಾಗವಹಿಸಿ ಸಹಕಾರ ನೀಡಬೇಕಿತ್ತು. ಆದರೆ ಅವರು ಸಭೆಗೆ ಗೈರಾಗಿದ್ದರು. ಹಾಗಾಗಿ ನಾನು ಬದುಕಿದ್ದೇನೆಯೇ ಅಥವಾ ಸಭೆಗೆ ಗೈರಾದವರು ಬದುಕಿದ್ದಾರ ಎಂದು ಮೈಸೂರು ಜಿಲ್ಲೆಯ ಸಾರ್ವಜನಿಕರು ತೀರ್ಮಾನಿಸಲಿ ಎಂದು ಹೇಳಿದರು.

ಮೈಸೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೂ ಐ.ಸಿ.ಯು ಹಾಗೂ ವೆಂಟಿಲೇಟರ್ ಹಾಸಿಗೆ ಸೇರಿದಂತೆ ಶೇ. 50 ರಷ್ಟು ಹಾಸಿಗೆಯನ್ನು ಜಿಲ್ಲಾಡಳಿತಕ್ಕೆ ಮೀಸಲಿಡಲಾಗಿದೆ. ಇದರಲ್ಲಿ ಬಡವರು, ಶ್ರೀಮಂತರು ಎಂದು ತಾರತಮ್ಯ ಮಾಡುತ್ತಿಲ್ಲ. ನನಗೂ ದಿನಕ್ಕೆ ಹತ್ತು ಫೋನ್ ಕರೆಗಳು ಬರುತ್ತಿವೆ. ಆದರೆ ನಾನು ಯಾರಿಗೂ ಕೂಡ ಇಂತದ್ದೆ ಹಾಸಿಗೆ ಕೊಡಿ ಎಂದು ಶಿಫಾರಸು ಮಾಡುತ್ತಿಲ್ಲ. ಯಾರೂ ಗಂಭೀರ ಸ್ಥೀತಿಯಲ್ಲಿ ಇರುತ್ತಾರೋ ಅವರಿಗೆ ಜಿಲ್ಲಾಡಳಿತ ಹಾಸಿಗೆ ದೊರಕಿಸಿ ಚಿಕಿತ್ಸೆ ನೀಡಲಿ ಎಂದರು.

ಮೈಸೂರು ಜಿಲ್ಲಾಡಳಿತವು ದಿನದ 24 ಗಂಟೆಯೂ ಕೆಲಸ ಮಾಡುತ್ತಿದೆ. ನಾವು ಕೂಡ ಸೋಂಕಿಗೆ ಒಳಪಟ್ಟವರಿಗೆ ತಕ್ಕಂತೆ ಅಗತ್ಯವಿರುವ ಹಾಸಿಗೆ ಸಿದ್ಧಪಡಿಸಲು ಪ್ರತಿನಿತ್ಯ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಕೋವಿಡ್-19 ವಿಚಾರದಲ್ಲಿ ಯಾರಿಗೂ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಮೈಸೂರು ಜಿಲ್ಲೆಯನ್ನು ಕೊರೋನ ಮುಕ್ತವಾಗಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಅಗತ್ಯವಿರುವ ಔಷದಿಗಳನ್ನು ಸರಬರಾಜು ಮಾಡಲಾಗುತ್ತದೆ. ರೆಮ್‌ಡಿಸಿವಿರ್ ಔಷಧಿಯನ್ನು ಆಸ್ಪತ್ರೆಗಳಿಗೆ ನೀಡಿದ್ದೇವೆ. 100 ವೆಂಟಿಲೇಟರ್ ಬಂದಿದ್ದು, 50 ಅನ್ನು ಬಿಡುಗಡೆ ಮಾಡಿದ್ದೇವೆ. ಆಕ್ಸಿಜನ್ ಕೂಡ ನೀಡಲಾಗುತ್ತಿದೆ. ಇನ್ನೂ ಅಗತ್ಯವಿರುವುದನ್ನು ಸರ್ಕಾರಕ್ಕೆ ಮನವಿ ಮಾಡಿ ಬಿಡುಗಡೆ ಮಾಡಿಸಲಾಗುವುದು ಎಂದರು.

Leave a Reply

comments

Related Articles

error: