ಕರ್ನಾಟಕಪ್ರಮುಖ ಸುದ್ದಿಮೈಸೂರು

ಸ್ವಲ್ಪ ಎಡವಿದರೂ ತಪ್ಪು ಸಂದೇಶ ಹೋಗುತ್ತದೆ ಎಚ್ಚರವಹಿಸಿ : ಅಧಿಕಾರಿಗಳಿಗೆ ಸಚಿವ ಎಸ್ ಟಿ.ಸೋಮಶೇಖರ್ ಸೂಚನೆ

ಮೈಸೂರು,ಏ.29:- ಕೋವಿಡ್-19ವಿಚಾರದಲ್ಲಿ ಒಳ್ಳೆಯ ಕೆಲಸ ಮಾಡಿ ಶೇ.1 ರಷ್ಟು ಎಡವಿದರೂ ತಪ್ಪು ಸಂದೇಶ ಹೋಗುತ್ತದೆ ಆದ್ದರಿಂದ ಅಧಿಕಾರಿಗಳು ತುಂಬಾ ಎಚ್ಚರದಿಂದ ಕೆಲಸ ನಿರ್ವಹಿಸಬೇಕು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋವಿಡ್-19 ಸ್ಥಿತಿಗತಿಯ ಕುರಿತು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.

ಈ ವರೆಗೆ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಪರಿಶೀಲನಾ ಸಭೆ ನಡೆಸಿದ್ದೇನೆ. ಬೆಂಗಳೂರು ಹಾಗೂ ಅಕ್ಕಪಕ್ಕದ ಜಿಲ್ಲೆಯ ಜನರು ಮೈಸೂರಿಗೆ ಬರುತ್ತಿರುವ ಕಾರಣ ಕೋವಿಡ್ ಸಂಖ್ಯೆ ಹೆಚ್ಚಿದ್ದು, ಮೈಸೂರು ತಾಲ್ಲೂಕು ಕಠಿಣ ಸ್ಥಿತಿ ತಲುಪಿದೆ ಎಂದರು.

ಸರ್ಕಾರದ ಆದೇಶದಂತೆ ಮೇ1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಎಲ್ಲರಿಗೂ ಉಚಿತ ಲಸಿಕೆ ನೀಡಲು ಸರ್ಕಾರ 2600ಕೋಟಿ ರೂ. ವಿನಿಯೋಗಿಸುತ್ತಿದೆ. ಕೋವಿಡ್-19 ಸ್ಥಿತಿಗತಿ ಮತ್ತು ಬೆಳವಣಿಗೆಯ ಕುರಿತು ಪ್ರತಿದಿನ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಪಿಎಂಸಿಯಲ್ಲಿ ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಮಾಡಲು ಇನ್ನೂ ಹೆಚ್ಚಿನ ಸಮಯ ಬೇಕಾಗುವುದರಿಂದ ಬೆಳಗ್ಗೆ 10ರವರೆಗೆ ನೀಡಿರುವ ಅವಕಾಶವನ್ನು 12 ಗಂಟೆ ವರೆಗೆ ವಿಸ್ತರಿಸುವಂತೆ ರೈತರು, ವರ್ತಕರು ಕೇಳುತ್ತಿದ್ದಾರೆ ಎಂದು ತಹಶೀಲ್ದಾರರು ಮಾಹಿತಿ ನೀಡಿದರು. ಪರಿಸ್ಥಿತಿಯ ಬಗ್ಗೆ ರೈತರಿಗೆ ಮನವರಿಕೆ ಮಾಡುವಂತೆ ಸಚಿವರು ತಿಳಿಸಿದರು.

*ಉಸ್ತುವಾರಿ ಸಚಿವರು ಕ್ರಿಯಾಶೀಲರಾದ್ದರಿಂದ ಜಿಲ್ಲೆಯಲ್ಲಿ ಕೋವಿಡ್ ಸಮರ್ಪಕ ನಿರ್ವಹಣೆ:* ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ಅವರು ಕ್ರಿಯಾಶೀಲರಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಸಮರ್ಪಕವಾಗಿ ಆಗುತ್ತಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಹೇಳಿದರು.

ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೂ ತೆರಳಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಹಾಗೆಯೇ ಕುಡಿಯುವ ನೀರು, ಸ್ವಚ್ಚತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಜಿಲ್ಲಾ ಪಂಚಾಯತಿಯ ಸಿ.ಇ.ಓ ಎ.ಎಂ. ಯೋಗೀಶ್ ಸೇರಿದಂತೆ ಇನ್ನಿತರು ಸಭೆಯಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: