ಕರ್ನಾಟಕ

ನರೇಗಾ ಯೋಜನೆಯಡಿ ಹೆಚ್ಚು ಉದ್ಯೋಗವಕಾಶ ನೀಡಬೇಕು: ಇಒ ಆರ್.ಉಮೇಶ್

ಯಳಂದೂರು,ಏ.29-ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಉದ್ಯೋಗವಕಾಶ ನೀಡಬೇಕು ಎಂದು ತಾಲ್ಲೂಕು ಕಾರ್ಯ ನಿರ್ವಾಹಕಾಧಿಕಾರಿ ಆರ್.ಉಮೇಶ್ ನಿರ್ದೇಶನ ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಿನ್ನೆ ನಡೆದ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವ ಸಂದರ್ಭದಲ್ಲಿ ಗ್ರಾಮೀಣ ಮಟ್ಟದ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿರುವುದರಿಂದ ಯೋಜನೆಯಡಿ ಉದ್ಯೋಗ ನೀಡಬೇಕು. ಪುರುಷ ಮತ್ತು ಮಹಿಳೆಯರಿಬ್ಬರಿಗೂ ದಿನಕ್ಕೆ 289ರೂ.ಗಳ ಕೂಲಿ ನೀಡಲಾಗುತ್ತಿದ್ದು, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಕಾರ್ಯ ನಿರ್ವಹಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆಯಡಿ ಮಹಿಳಾ ಕೂಲಿಕಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕೂಲಿಕಾರರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಪ್ರಚಾರಕಾರ್ಯವನ್ನು ತುರ್ತಾಗಿ ಹಮ್ಮಿಕೊಂಡು ಹೆಚ್ಚು ಜನರು ಕೆಲಸಕ್ಕೆ ಬರುವಂತೆ ಪ್ರೇರೇಪಿಸಬೇಕು ಎಂದರು.

ಪಂಚಾಯಿತಿ ಮಟ್ಟದಲ್ಲಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ಪ್ರಾರಂಭಿಸಿರುವುದರ ಮತ್ತು ಕೋವಿಡ್- 19 2ನೇ ಅಲೆಯನ್ನು ನಿಯಂತ್ರಿಸಲು ಕೈಗೊಂಡಿರುವ ಕಟ್ಟು ನಿಟ್ಟಿನ ಕ್ರಮಗಳ ಬಗ್ಗೆ ಸಭೆಯಲ್ಲಿ ಪರಿಶೀಲಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಪ್ರಭಾರ ಸಹಾಯಕ ನಿರ್ದೇಶಕರಾದ ಗಂಗಾಧರ್, ಶಿವಕುಮಾರ್, ತಾಲ್ಲೂಕು ಎಂ.ಐ.ಎಸ್ ಸಂಯೋಜಕರಾದ ದೀಪಕ್, ಇಂಜಿನಿಯರ್ ಪ್ರಭು, ರಾಕೇಶ್, ಬಿ.ಎಫ್.ಟಿ ನಿಂಗರಾಜು, ಚಂದ್ರು, ತಾಲ್ಲೂಕು ಐ.ಇ.ಸಿ ಸಂಯೋಜಕರಾದ ಹರೀಶ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. (ಎಂ.ಎನ್)

Leave a Reply

comments

Related Articles

error: